ಸದ್ಯದಲ್ಲೇ ನಿಸ್ಸಾನ್ ಎಕ್ಸ್-ಟ್ರೈಲ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆ
ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆ ನಿಸ್ಸಾನ್, ಅತಿ ಶೀಘ್ರದಲ್ಲೇ ಎಕ್ಸ್ ಟ್ರೈಲ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರಮುಂಬರುವ ನವೆಂಬರ್ ತಿಂಗಳಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಭಾರತ ಪ್ರವೇಶವಾಗಲಿದೆ.
ಈ ಹಿಂದೆ 2004ನೇ ಇಸವಿಯಲ್ಲಿ ಎಕ್ಸ್ ಟ್ರೈಲ್ ಭಾರತದಲ್ಲಿ ಬಿಡುಗಡೆಯಾಗಿತ್ತಾದರೂ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿತ್ತು. ಈಗ ಮಗದೊಮ್ಮೆ ಭರ್ಜರಿ ರಿ ಎಂಟ್ರಿಯನ್ನು ಎದುರು ನೋಡುತ್ತಿದೆ.

ನಿಸ್ಸಾನ್ ಎಕ್ಸ್ ಟ್ರೈಲ್ ಭಾರತದಲ್ಲಿ 35 ಲಕ್ಷ ರುಪಾಯಿಗಳಿಂದ 35 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಇದು ಎಕ್ಸ್ ಶೋ ರೂಂ ಬೆಲೆಯಾಗಿರಲಿದ್ದು, ಆರ್ ರೋಡ್ ಬೆಲೆ ಮತ್ತಷ್ಟು ದುಬಾರಿಯೆನಿಸಲಿದೆ.
ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಭಾರತದಲ್ಲಿ ಬಿಡುಗಡೆ ಮಾಡುವುದು ನಿಸ್ಸಾನ್ ಗುರಿಯಾಗಿದೆ. ಪ್ರಸ್ತುತ ಕಾರು ಆಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿದೆ.

ಇನ್ನು ಕಾರಿನಡಿಯಲ್ಲಿ 2.0 ಲೀಟರ್ ಡಿಸಿಐ (dCi) ಡೀಸೆಲ್ ಎಂಜಿನ್ ಆಳವಡಿಕೆಯಾಗಲಿದ್ದು, ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಲಭ್ಯವಿರಲಿದೆ. ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿರುವುದಿಲ್ಲ.
ಅಂತಿಮವಾಗಿ ಭಾರತ ಮಾರುಕಟ್ಟೆಯಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಷೆವರ್ಲೆ ಟ್ರೈಲ್ ಬ್ಲೇಜರ್, ಫೋರ್ಡ್ ಎಂಡೀವರ್, ಹ್ಯುಂಡೈ ಸಾಂಟಾಫೆ ಮತ್ತು ಟೊಯೊಟಾ ಫಾರ್ಚ್ಯುನರ್ ಮಾದರಿಗಳಿಗೆ ಹೊಸತಾದ ನಿಸ್ಸಾನ್ ಎಕ್ಸ್ ಟ್ರೈಲ್ ಪೈಪೋಟಿ ಒಡ್ಡಲಿದೆ.


Click it and Unblock the Notifications








