50/50: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ; ಅಬಕಾರಿ ಸುಂಕ ಹೆಚ್ಚಳ
ಸಂಕ್ರಾಂತಿ ಕೊಡುಗೆ ಸ್ವಲ್ಪ ತಡವಾಗಿಯಾದರೂ ಜನ ಸಾಮಾನ್ಯರಿಗೆ ಇಂಧನ ಬೆಲೆ ಇಳಿಕೆ ರೂಪದಲ್ಲಿ ತಲುಪಿದೆ. ಹೌದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿರುವ ಹಿನ್ನಲೆಯಲ್ಲಿ ದೇಶದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮಗದೊಮ್ಮೆ ಗಣನೀಯ ಇಳಿಕೆ ಕಂಡುಬಂದಿದೆ.
ಈ ಬಗ್ಗೆ ಹೇಳಿಕೆ ಹೊರಡಿಸಿರುವ ತೈಲ ಸಂಸ್ಥೆಗಳು ಪೆಟ್ರೋಲ್ ಬೆಲೆಯನ್ನು 2.42 ಹಾಗೂ ಡೀಸೆಲ್ ಬೆಲೆ 2.25 ರು.ಗಳಷ್ಟು ಇಳಿಕೆ ಮಾಡುವುದಾಗಿ ಘೋಷಿಸಿದೆ. ಪರಿಷ್ಕೃತ ಬೆಲೆಗಳು ಕಳೆದ ಮಧ್ಯರಾತ್ರಿಯಿಂದಲೇ (ಶುಕ್ರವಾರ) ಜಾರಿಗೆ ಬಂದಿದೆ.
ಇದರೊಂದಿಗೆ 2014 ಆಗಸ್ಟ್ ತಿಂಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಸತತವಾಗಿ ಒಂಬತ್ತನೇ ಬಾರಿಗೆ ಇಳಿಕೆ ಕಂಡುಬಂದಿದೆ. ಅದೇ ರೀತಿ 2014 ಅಕ್ಟೋಬರ್ ಬಳಿಕ (ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಿದ ಬಳಿಕ) ಡೀಸೆಲ್ ಬೆಲೆಯಲ್ಲಿ ಐದನೇ ಬಾರಿಗೆ ಇಳಿಕೆಯಾಗಿದೆ.

ಬಲ್ಲ ಮೂಲಗಳ ಪ್ರಕಾರ ಪೆಟ್ರೋಲ್‌ಗೆ 4.42 ರು. ಹಾಗೂ ಡೀಸೆಲ್ ಬೆಲ್ 4.25 ರು. ಕಡಿತವಾಗಬೇಕಿತ್ತು. ಆದರೆ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಎರಡು ರು.ಗಳಷ್ಟು ಹೆಚ್ಚಳಗೊಳಿಸಿರುವುದು ಬೆಲೆ ಇಳಿಕೆಯ ಪ್ರಯಾಣದಲ್ಲಿ ತಗ್ಗಲು ಕಾರಣವಾಗಿದೆ. ಇದರೊಂದಿಗೆ ಸರಕಾರವು ಬೆಲೆ ಇಳಿಕೆಯ ಲಾಭ ಬಾಚಿಕೊಂಡಿದೆ.
ಒಟ್ಟಾರೆಯಾಗಿ 2014 ನವೆಂಬರ್ ತಿಂಗಳ ಬಳಿಕ ನಾಲ್ಕನೇ ಬಾರಿಗೆ ಅಬಕಾರಿ ಸುಂಕವನ್ನು ಸರಕಾರ ಏರಿಕೆಗೊಳಿಸಿದ್ದು, ಒಟ್ಟು 20,000 ಕೋಟಿ ರು.ಗಳ ಹೆಚ್ಚುವರಿ ತೆರಿಗೆ ಸಂಗ್ರಹಿಸಲಿದೆ. ಇದನ್ನು ಮುಂಬರುವ ಆರ್ಥಿಕ ಸಾಲಿನಲ್ಲಿ ದೇಶದ ಮೂಲಸೌಕರ್ಯ ವೃದ್ಧಿ ಯೋಜನೆಗೆ ಬಳಕೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಪ್ರತಿ ಬ್ಯಾರಲ್‌ಗೆ 45 ಡಾಲರ್‌ಗಿಂತಲೂ ಕಡಿಮೆಯಾಗಿದ್ದು, 2014 ಜೂನ್ ಬಳಿಕ ಅರ್ಧದಷ್ಟು ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 65 ರು.ಗಿಂತಲೂ ಕಡಿಮೆಯಾಗಿದೆ.
ಇನ್ನೊಂದೆಡೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕಳೆದ 44 ತಿಂಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ತಲುಪಿದೆ. ಪರಿಷ್ಕೃತ ದರದಂತೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 58.91 ರು.ಗಳಾಗಿರಲಿದೆ.


Click it and Unblock the Notifications








