ಇನ್ನು ಮುಂದೆ 'ಮೊಬೈಲ್ ಆಪ್' ಮುಖಾಂತರ ಕಾರು ಮಾರಾಟ
ಇಡೀ ಜಗತ್ತೇ 'ಮೊಬೈಲ್' ಎಂಬ ಚೊಕ್ಕದಾದ ಉಪಕರಣದೊಳಗೆ ಮುದುಡಿಕೊಳ್ಳುತ್ತಿದೆ. ಇದನ್ನು ಸ್ಪಷ್ಟವಾಗಿ ಮನಗಂಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ನೂತನ ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊಬೈಲ್ ಆಪ್ ಮುಖಾಂತರವೇ ಕಾರು ಮಾರಾಟ ನಡೆಸಲಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬಹುನಿರೀಕ್ಷಿತ ರೆನೊ ಕ್ವಿಡ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಂಬಂಧ ವಿಶಿಷ್ಟ ಮೊಬೈಲ್ ಆಪ್ ಅನ್ನು ರೆನೊ ಅಭಿವೃದ್ಧಿಪಡಿಸಿದೆ. ಇದು ಮುಂಬರುವ ಸೆಪ್ಟೆಂಬರ್ 14ರಂದು ಲೋಕರ್ಪಣೆಯಾಗಲಿದೆ.

ಇದುವರೆಗೆ ವಾಹನ ಖರೀದಿ ಮಾಡುವವರು ನೇರವಾಗಿ ಶೋ ರೂಂಗಳನ್ನು ಸಂಪರ್ಕಿಸಬೇಕಾಗಿತ್ತು. ಇನ್ನು ಕೆಲವು ಸಂಸ್ಥೆಯು ಆನ್‌ಲೈನ್ ಮುಖಾಂತರವೂ ಕಾರು ಮಾರಾಟ ಮಾಡುವ ಯೋಜನೆಗೆ ಕೈ ಹಾಕಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ರೆನೊ ಮೊಬೈಲ್ ಆಪ್ ಮುಖಾಂತರ ಕಾರು ಮಾರಾಟ ಪ್ರಕ್ರಿಯೆನ್ನು ಆರಂಭಿಸುತ್ತಿದೆ.
ರೆನೊ ಅಭಿವೃದ್ಧಿಪಡಿಸುತ್ತಿರುವ ಆಪ್, ತದ್ರೂಪ ಶೋ ರೂಂನಂತೆ ಕೆಲಸ ಮಾಡಲಿದೆ. ದೆಹಲಿ ಕೇಂದ್ರಿತವಾಗಿ ಇದು ಕಾರ್ಯಾಚರಿಸಲಿದ್ದು, ಗ್ರಾಹಕರ ಜೊತೆಗೆ ಮಾರಾಟ ಕಾರ್ಯನಿರ್ವಾಹಕರು ನೇರವಾಗಿ ಸ್ಪಂದಿಸಲಿದ್ದಾರೆ.
ಈ ಆಪ್ ಪ್ರತಿ ಅರ್ಧ ತಾಸಿನಲ್ಲಿ 50ರಷ್ಟು ಆಕಾಂಕ್ಷಿ ಖರೀದಿಗಾರರೊಂದಿಗೆ ಇಂಟರ್ ನೆಟ್ ಮುಖಾಂತರ ವಿಡಿಯೋ ಕಾನ್ಸೆರನ್ಸ್ ಮಾಡುವಷ್ಟು ಶಕ್ತವಾಗಿರಲಿದೆ. ಇದಕ್ಕಾಗಿ 100ಗಿಂತಲೂ ಹೆಚ್ಚು ಮಾರಾಟ ಕಾರ್ಯನಿರ್ವಾಹಕರನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರಿಗೆ ಸರ್ವೀಸ್ ಅಗತ್ಯಗಳನ್ನು ಪೂರೈಸಲು ಮೊಬೈಲ್ ಶೋ ರೂಂ ಹಾಗೂ ಮೊಬೈಲ್ ವರ್ಕ್ ಶಾಪ್ ಸೇವೆ ನೀಡುವುದಾಗಿಯೂ ಸಂಸ್ಥೆ ತಿಳಿಸಿದೆ.
ಇನ್ನು ರೆನೊ ಕ್ವಿಡ್ ಬಗ್ಗೆ ಮಾತನಾಡುವುದಾದ್ದಲ್ಲಿ ಭಾರತ ಸೇರಿದಂತೆ ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ ಶೇಕಡಾ 98ರಷ್ಟು ಸ್ಥಳೀಯಗೊಳಿಸಲಾಗಿದೆ. ಇದು ಮುಂಚೂಣಿಯ ಮಾರುತಿ ಸುಜುಕಿ ಹಾಗೂ ಹ್ಯುಂಡೈಗಿಂತಲೂ ಹೆಚ್ಚಾಗಿದ್ದು, ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪಲು ನೆರವಾಗಲಿದೆ.
800 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ ಕ್ರಾಸೋವರ್ ಆಕಾರವನ್ನು ಪಡೆದುಕೊಂಡಿದ್ದು, 2.9 ಲಕ್ಷ ರು.ಗಳಿಂದ 4.5 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ. ಅಲ್ಲದೆ ಪರಿಣಾಮಕಾರಿ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








