ಹಾಗೊಂದು ದಿನ ಸಚಿನ್ ಮೆಕ್ಯಾನಿಕ್ ಆದಾಗ...!
ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಬಳಿಕ ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮ ತಾವೇ ತೊಡಗಿಸಿಕೊಂಡಿರುವ ಮಾಜಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇದೀಗ ವಿನೂತನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ನೀವದನ್ನು ನಂಬುವೀರಾ? ಹಾಗೊಂದು ದಿನ ಕ್ರಿಕೆಟ್ ದೇವರು ಮೆಕ್ಯಾನಿಕ್ ಆಗಿರುವ ಘಟನೆ ನಡೆದಿದೆ.
ಸಚಿನ್ ತೆಂಡೂಲ್ಕರ್ ವಿಶೇಷ ಪುಟಕ್ಕೆ ಭೇಟಿ ಕೊಡಲು ಮರೆಯದಿರಿ
ಜಗತ್ತಿನ ಐಷಾರಾಮಿ ಸಂಸ್ಥೆ ಬಿಎಂಡಬ್ಲ್ಯು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸಚಿನ್ ಇಂತಹದೊಂದು ವೇಷ ಕಟ್ಟಿಕೊಂಡಿದ್ದಾರೆ. ಬಳಿಕ ಸ್ವತ: ಬಿಎಂಡಬ್ಲ್ಯು ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಚಿನ್, ಇಂತಹದೊಂದು ಕ್ಷಣವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ.

ಈ ಮೂಲಕ ಕ್ರಿಕೆಟ್ ಬಾಲನ್ನು ಸಿಕ್ಸರಿಗಟ್ಟುವುದರಷ್ಟೇ ಅಲ್ಲದೆ ಪರಿಶ್ರಮಿಸಿದರೆ ತಾವೊಬ್ಬ ಅತ್ಯುತ್ತಮ ಮೆಕ್ಯಾನಿಕ್ ಕೂಡಾ ಆಗಬಲ್ಲೆನು ಎಂಬುದನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತೋರಿಸಿ ಕೊಟ್ಟಿದ್ದಾರೆ.

ಬಿಎಂಡಬ್ಲ್ಯು 'ಮೇಕ್ ಇನ್ ಇಂಡಿಯಾ'ದ ಭಾಗವಾಗಿ ಸಚಿನ್ ಇಂತಹದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚೆನ್ನೈನ ಬಿಎಂಡಬ್ಲ್ಯು ಘಟಕದಲ್ಲಿ ಈ ರೋಚಕ ಕ್ಷಣಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದವು.

ಚೆನ್ನೈನ ಘಟಕದಲ್ಲಿ ಶೇಕಡಾ 50ರಷ್ಟು ಸ್ಥಳೀಯವಾಗಿ ಕಾರು ಜೋಡಣೆ ಮಾಡುವ ತನ್ನ ಬದ್ಧತೆಯನ್ನು ಪ್ರಕಟಿಸಿರುವ ಬಿಎಂಡಬ್ಲ್ಯು ಈ ವಿಶೇಷ ಕ್ಷಣಕ್ಕಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಆಹ್ವಾನಿಸಿದ್ದರು.

ಹೀಗೆ ಒಂದು ದಿನ ಚೆನ್ನೈ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕಾಲ ಕಳೆದಿರುವ ಸಚಿನ್ ನೆಟ್, ಬೋಲ್ಟ್ ಬಿಗಿಯಾಗಿಸಿದ್ದರಲ್ಲದೆ ಅಲ್ಲಿನ ಎಂಜಿನಿಯರ್ ಗಳ ಜೊತೆ ಅನುಭವ ಹಂಚಿಕೊಂಡರು.

ಬಳಿಕ ಮಾತನಾಡಿದ ಅವರು "ತಮ್ಮದೇ ಕೈಗಳಿಂದ ಬಿಎಂಡಬ್ಲ್ಯು ನಿರ್ಮಿಸುವ ಅನುಭವ ನಿಜಕ್ಕೂ ವಿಶಿಷ್ಟ ಹಾಗೂ ಅವಿಸ್ಮರಣೀಯವಾಗಿದೆ" ಎಂದಿದ್ದಾರೆ. ಅಲ್ಲದೆ "ಮುಂದಿನ ಬಾರಿ ಬಿಎಂಡಬ್ಲ್ಯು ಖರೀದಿಸಿದಾಗ ನಾನೊಂದು ಬಿಎಂಡಬ್ಲ್ಯು ನಿರ್ಮಿಸಿದ್ದೇನೆಂದು ಎಂದು ಹೆಮ್ಮೆಯಿಂದಲೇ ಹೇಳಬಲ್ಲೆನು" ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು "ಚಿಕ್ಕವನಿದ್ದಾಗ ಬಿಎಂಡಬ್ಲ್ಯು ಕಾರೊಂದನ್ನು ತನ್ನದಾಗಿಸಿಕೊಳ್ಳುವುದು ತನ್ನ ಅಭಿಲಾಷೆಯಾಗಿತ್ತು" ಎಂದು ವಿವರಿಸಿದ್ದಾರೆ.

ಚೆನ್ನೈನ ಘಟಕದಲ್ಲಿ ಎಂಜಿನಿಯರ್ ಗಳ ಸಹಾಯದೊಂದಿಗೆ ಬಿಎಂಡಬ್ಲ್ಯು 5 ಸಿರೀಸ್ ಕಾರನ್ನು ಸಚಿನ್ ಜೋಡಣೆ ಮಾಡಿದರು. ಅಲ್ಲದೆ ಈ "ವಿಶೇಷ ಸಚಿನ್ ಎಡಿಷನ್ ಕಾರು" ಸದ್ಯದಲ್ಲೇ ಮಾರುಕಟ್ಟೆಯನ್ನು ತಲುಪಲಿದೆ.

ಕ್ರಿಕೆಟ್ ಮೈದಾನದಲ್ಲಿ 24 ವರ್ಷಗಳ ಅನುಭವ ಸಂಪಾದಿಸಿರುವ ಸಚಿನ್ ಅವರಿಗೆ ಇದು ಹೊಸ ಅನುಭವಾಗಿತ್ತು. ಅಲ್ಲದೆ ತಾನೊಬ್ಬ ಬಿಎಂಡಬ್ಲ್ಯು ಉತ್ಸಾಹಿಯಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಪಿಲಿಪ್ ವಾನ್ ಸಹ್ರ್ ಸಹ ಉಪಸ್ಥಿತರಿದ್ದರು. ಅಂದ ಹಾಗೆ 2007 ಮಾರ್ಚ್ 29ರಂದು ಚೆನ್ನೈನ ಬಿಎಂಡಬ್ಲ್ಯು ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.
ಬಿಎಂಡಬ್ಲ್ಯು 5 ಸಿರೀಸ್ ಕಾರನ್ನು ಜೋಡಣೆ ಮಾಡುತ್ತಿರುವ ಸಚಿನ್ - ಆಕರ್ಷಕ ವೀಡಿಯೋ ವೀಕ್ಷಿಸಿ


Click it and Unblock the Notifications








