ಅತಿ ಶೀಘ್ರದಲ್ಲಿ ದಟ್ಸನ್ ರೆಡಿ ಗೊ ಸ್ಪೋರ್ಟ್ ಬಿಡುಗಡೆ
ಇತ್ತೀಚೆಗಷ್ಟೇ ರೆಡಿ ಗೊ ಸಣ್ಣ ಕಾರನ್ನು ಪರಿಚಯಿಸಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ದಟ್ಸನ್, ಅತಿ ಶೀಘ್ರದಲ್ಲೇ ರೆಡಿ-ಗೊ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ದಟ್ಸನ್ ರೆಡಿ ಗೊ ಸ್ಪೋರ್ಟ್ ಸೀಮಿತ ಆವೃತ್ತಿಯು ಇದೇ ಮುಂಬರುವ ಸೆಪ್ಟೆಂಬರ್ 29ರಂದು ಬಿಡುಗಡೆಯಾಗಲಿದೆ.
ಬ್ರಿಜಿಲ್ ನ ರಿಯೊದಲ್ಲಿ ನಡೆದ ಜಾಗತಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಮಲಿಕ್ ಸಾನಿಧ್ಯವು ದಟ್ಸನ್ ಹೊಸ ಕಾರಿನ ಬಿಡುಗಡೆ ಸಮಾರಂಭವನ್ನು ಮತ್ತಷ್ಟು ಸ್ಮರಣೀಯವಾಗಿಸಲಿದೆ.

ಈ ನಡುವೆ ದಟ್ಸನ್ ರೆಡಿ ಗೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಟೀಸರ್ ಚಿತ್ರ ಬಿಡುಗಡೆಗೊಂಡಿದ್ದು, ಹೆಚ್ಚಿನ ಕುತೂಹಲ ಮೂಡಿಸಿದೆ. ನಿಮ್ಮ ಮಾಹಿತಿಗಾಗಿ ರೆನೊ ಕ್ವಿಡ್ ತಳಹದಿಯಲ್ಲೇ ದಟ್ಸನ್ ರೆಡಿ ಗೊ ನಿರ್ಮಾಣಗೊಂಡಿದೆ.
ಪ್ರಮುಖವಾಗಿಯೂ ದಟ್ಸನ್ ರೆಡಿ ಗೊ ಸ್ಪೋರ್ಟ್ ಸೀಮಿತ ಆವೃತ್ತಿಯಲ್ಲಿ ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರಲಿದೆ. ಕಾರಿನ ಹೊರಮೈ ಸೇರಿದಂತೆ ಒಳಮೈಯಲ್ಲೂ ಅಂದತೆಯಲ್ಲಿ ಮಾರ್ಪಾಡುಗೊಳ್ಳಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದು 799 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.
ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ದಟ್ಸನ್ ಎಂಟ್ರಿ ಲೆವೆಲ್ ಕಾರು ಡೇಟೈಮ್ ರನ್ನಿಂಗ್ ಲೈಟ್ಸ್, 2 ಡಿನ್ ಆಡಿಯೋ ಸಿಸ್ಟಂ ಜೊತೆ ಆಕ್ಸ್, ಯುಎಸ್ ಬಿ ಕನೆಕ್ಟಿವಿಟಿ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.
ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆಡಿ ಗೊ, ಬಿಡುಗಡೆಯಾದ ತಿಂಗಳಲ್ಲಿ 2925 ಮತ್ತು ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅನುಕ್ರಮವಾಗಿ 3940 ಮತ್ತು 3205 ಯುನಿಟ್ ಗಳಷ್ಟು ಮಾರಾಟವನ್ನು ಕಂಡಿತ್ತು. ಈಗ ಸ್ಪೋರ್ಟ್ ಆವೃತ್ತಿಯ ಆಗಮನದೊಂದಿಗೆ ಹಬ್ಬದ ಆವೃತ್ತಿಯಲ್ಲಿ ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿದೆ.


Click it and Unblock the Notifications


















































