ಫೋರ್ಡ್‌ನಿಂದ ಮಗದೊಂದು ಆಕರ್ಷಕ ಎಸ್‌ಯುವಿ ತಯಾರಿ
ಭಾರತದಲ್ಲಿ ಶ್ರೇಷ್ಠ ಗುಣಮಟ್ಟದ ಕಾರುಗಳನ್ನು ಪರಿಚಯಿಸಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಧೆಯು ಮುಂಬರುವ 2016 ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳಕ್ಕೆ ಭರ್ಜರಿ ತಯಾರಿಯನ್ನೇ ನಡೆಸುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳದಲ್ಲಿ ಫೋರ್ಡ್ ಸಂಸ್ಥೆಯು ಅತಿ ನೂತನ ಕುಗಾ (Kuga) ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಲಿದೆ.

ಇತ್ತೀಚೆಗಷ್ಟೇ ಅಧ್ಯಯನ ಹಾಗೂ ಸಂಶೋಧನೆಗಾಗಿ ಕುಗಾ ಕ್ರೀಡಾ ಬಳಕೆಯ ವಾಹನವನ್ನು ಭಾರತಕ್ಕೆ ಆಮದು ಮಾಡಲಾಗಿತ್ತು. ಇದು ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪಲಿದೆ ಎಂದು ವಿಶ್ಲೇಷಕರು ಅಭಿಮತ ವ್ಯಕ್ತಪಡಿಸುತ್ತಾರೆ.
ಕುಗಾ ಈಗಾಗಲೇ ಹಲವಾರು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಪಡೆದಿದೆ. ಇದು 2.0 ಲೀಟರ್ ಡೀಸೆಲ್ ಹಾಗೂ 1.5 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕುಗಾ ಆರು ಸ್ಪೀಡ್ ಮ್ಯಾನುವಲ್ ಅಂತೆಯೋ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿಂದ ಲಭ್ಯವಿರುತ್ತದೆ. ಅಲ್ಲದೆ ಆಲ್ ವೀಲ್ ಡ್ರೈವ್ ಪ್ರಮುಖ ಆಕರ್ಷಣೆಯಾಗಿದೆ.
ಹಾಗೊಂದು ವೇಳೆ ಈ ಬಹುನಿರೀಕ್ಷಿತ ಎಸ್‌ಯುವಿ ಭಾರತ ಪ್ರವೇಶ ಪಡೆದ್ದಲ್ಲಿ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಹಾಗೂ ಎಂಡೀವರ್ ಪ್ರೀಮಿಯಂ ಎಸ್‌ಯುವಿಗಳ ನಡುವೆ ಗುರುತಿಸಿಕೊಳ್ಳಲಿದೆ.
ಇದು ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಮಹೀಂದ್ರ ಎಕ್ಸ್‌ಯುವಿ500 ಹಾಗೂ ಟಾಟಾ ಹೆಕ್ಸಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಅಂತೆಯೇ 12.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications











