ಕಾದಿರಿ; ಪ್ರಸಕ್ತ ಸಾಲಿನಲ್ಲೇ ಮಹೀಂದ್ರ ಮಿನಿ ಬೊಲೆರೊ ಬಿಡುಗಡೆ
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ದೇಶದ ಮಾರುಕಟ್ಟೆಗೆ ಮಗದೊಂದು ಐಕಾನಿಕ್ ವಾಹನದ ಹೊಸ ಅವತಾರದ ಪ್ರವೇಶವಾಗಲಿದೆ. ಅದುವೇ, ಮಿನಿ ಬೊಲೆರೊ.
ಹೌದು, ಇಂತಹದೊಂದು ಯೋಚನೆಯೊಂದಿಗೆ ದೇಶದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಮುಂದೆ ಬಂದಿದೆ.

ಪ್ರಮುಖವಾಗಿಯೂ ತೆರಿಗೆ ವಸೂಲಿಯಿಂದ ಮುಕ್ತಿ ಪಡೆಯಲು ಮಹೀಂದ್ರ ಇಂತಹದೊಂದು ನೀತಿಯನ್ನು ಅನುಸರಿಸುತ್ತಿದೆ. ಈ ಸಂಬಂಧ ಮಹೀಂದ್ರ ಎಂಜಿನಿಯರ್ ಗಳು ನಿರಂತರ ಪ್ರಯತ್ನದಲ್ಲಿ ಮುಂದುವರಿದಿದ್ದಾರೆ.

ನೂತನ ಬೊಲೆರೊ ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿದ್ದು, 1.5 ಲೀಟರ್ ಎಂಜಿನ್ ಜೋಡಣೆಯಾಗುವ ಸಾಧ್ಯತೆಯಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಕಾರಿನಲ್ಲಿ 2.5 ಲೀಟರ್ ಎಂಜಿನ್ ಮತ್ತು 4.17 ಮೀಟರ್ ಉದ್ದವಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2.0 ಲೀಟರ್ ಮೇಲ್ಪಟ್ಟ ಡೀಸೆಲ್ ಕಾರುಗಳ ಮೇಲೆ ನಿಷೇಧ ಹೇರಲಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹೀಂದ್ರ, ಪರಿಮಿತಿಯೊಳಗೆ ನೂತನ ಎಂಜಿನ್ ಆಯ್ಕೆಗಳೊಂದಿಗೆ ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ500 ಬಿಡುಗಡೆಗೊಳಿಸಿತ್ತು.

ಪ್ರಸ್ತುತ ನಿಯಮ ಗ್ರಾಮೀಣ ಪ್ರದೇಶಗಳಿಗೆ ವ್ಯಾಪಿಸಿಲ್ಲ. ಆದರೆ ತನ್ನ ಭವಿಷ್ಯದ ಯೋಜನೆಯ ಭಾಗವಾಗಿ ಮಹೀಂದ್ರ ನೂತನ ಬೊಲೆರೊ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದು 'ಯು108' ಎಂಬ ಕೋಡ್ ಪಡೆದಿದೆ.

ಇದರೊಂದಿಗೆ ನಾಲ್ಕು ಮೀಟರ್ ಉದ್ದ ಪರಿಧಿಯಲ್ಲಿ ಮಹೀಂದ್ರ ಶ್ರೇಣಿಯ ಕಾರುಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಲಿದೆ. ಈ ವಿಭಾಗದಲ್ಲಿ ಟಿಯುವಿ 300, ಕೆಯುವಿ100 ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ನುವೊಸ್ಪೋರ್ಟ್ ಸಹ ಕಾಣಿಸಿಕೊಂಡಿದೆ.

2016 ಸಾಲಿನ ದ್ವಿತಿಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ನೂತನ ಬೊಲೆರೊ ವಾರ್ಷಿಕವಾಗಿ 25,000 ಯುನಿಟ್ ಗಳಷ್ಟು ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು ಹೊಸ ಢಿಕ್ಕಿ ನಿಯಮ ಜಾರಿಗೆ ಬರಲಿರುವಂತೆಯೇ 2018-19ನೇ ಸಾಲಿನಲ್ಲಿ ನೂತನ ತಲೆಮಾರಿನ ಬೊಲೆರೊ ವಾಹನ ಬಿಡುಗಡೆಯಾಗುವ ವರೆಗೆ ಈ ಮಾದರಿಯನ್ನು ಜೀವಂತವಾಗಿರಿಸಿಕೊಳ್ಳಲು ನೆರವಾಗಲಿದೆ.

ಭಾರತ ಮಾರುಕಟ್ಟೆಯಲ್ಲಿ ದಶಕದಿಂದಲೂ ನೆಲೆಯೂರಿ ನಿಂತಿರುವ ಮಹೀಂದ್ರ ಬೊಲೆರೊ ಪ್ರತಿ ತಿಂಗಳಲ್ಲಿ 7,000 ಯುನಿಟ್ ಗಳಷ್ಟು ಮಾರಾಟವನ್ನು ಕಾಯ್ದುಕೊಂಡಿರುವುದು ಗಮನಾರ್ಹ. ಇದು ಮಹೀಂದ್ರದ ಮಾಸಿಕ ಮಾರಾಟದ ಶೇಕಡಾ 30ರಷ್ಟಾಗಿದೆ.

ಇವೆಲ್ಲದರ ಹೊರತಾಗಿ ಏಳು ಸೀಟುಗಳ ಟಿಯುವಿ300 ವರ್ಧಿತ ಕಾರಿನ ಅಭಿವೃದ್ಧಿಯಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಇದು ಯು302 ಎಂಬ ಕೋಡ್ ಪಡೆದಿದೆ. ಅಷ್ಟೆ ಯಾಕೆ ಯು321 ಎಂಬ ಕೋಡ್ ಹೆಸರಿನ ಇನ್ನೋವಾ ಪ್ರತಿಸ್ಪರ್ಧಿಯನ್ನು ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ.


Click it and Unblock the Notifications








