ಸಕತ್ ಪವರ್‌ಫುಲ್ ಮಹೀಂದ್ರ ಮಿನಿ ಬೊಲೆರೊ
ದೇಶದ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ವಿಭಾಗದ ದೈತ್ಯ ವಾಹನ ನಿರ್ಮಾಣ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ತನ್ನ ಜನಪ್ರಿಯ ಬೊಲೆರೊ ಕಾರಿನ ಸಣ್ಣ ರೂಪವನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದು ಟಿಯುವಿ100, ಕೆಯುವಿ100 ಮತ್ತು ನುವೊಸ್ಪೋರ್ಟ್ ಬಳಿಕ ಸಂಸ್ಥೆಯಿಂದ ಬಿಡುಗಡೆಯಾಗಲಿರುವ ನಾಲ್ಕನೇ ಕಾಂಪಾಕ್ಟ್ ಎಸ್‌ಯುವಿ ಎಂದೆನಿಸಿಕೊಳ್ಳಲಿದೆ.
ಮಹೀಂದ್ರ ಬೊಲೆರೊ ದೇಶದ ಅತ್ಯಂತ ಜನಪ್ರಿಯ ಆನ್ ಮತ್ತು ಆಫ್ ರೋಡ್ ವಾಹನವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಈ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಎಷ್ಟೇ ಕಾರುಗಳ ಪ್ರವೇಶವಾದರೂ ದೃಢಕಾಯದ ಬೊಲೆರೊ ಮಾತ್ರ ತನ್ನ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ.

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಬೊಲೆರೊ ಒಟ್ಟಾರೆ ಉದ್ದವನ್ನು 170 ಎಂಎಂಗಳಷ್ಟು ಕಡಿತಗೊಳಿಸಲಾಗುವುದು. ಹಾಗಿದ್ದರೂ ಚಕ್ರಾಂತರದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಇದರ ಬದಲಾಗಿ ಮುಂಭಾಗದ ಬಂಪರ್ ಮತ್ತು ಹಿಂಭಾಗದಲ್ಲಿ ಕತ್ತರಿ ಪ್ರಯೋಗ ಮಾಡಲಾಗುವುದು. ಉಳಿದ ದೇಹ ರಚನೆಯನ್ನು ತನ್ನ ಹಿರಿಯ ಸೋದರನೊಂದಿಗೆ ಹಂಚಿಕೊಳ್ಳಲಾಗುವುದು.

ಕಾರಿನೊಳಗೆ ನೂತನ ಡ್ಯಾಶ್ ಬೋರ್ಡ್, ನುವೊಸ್ಪೋರ್ಟ್ ಮತ್ತು ಟಿಯುವಿ300 ಗೆ ಸಮಾನವಾದ ಏಳು ಸೀಟು ವಿನ್ಯಾಸದೊಂದಿಗೆ ಹೆಚ್ಚಿನ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗುವುದು.

ಬಹು ದೊಡ್ಡ ಬದಲಾವಣೆಯು ಕಾರಿನಡಿಯಲ್ಲಿರುವ ಎಂಜಿನ್ ನಲ್ಲಿ ಕಂಡುಬರಲಿದೆ. ಇಲ್ಲೂ ಟಿಯುವಿ300 ಹಾಗೂ ನುವೊಸ್ಪೋರ್ಟ್ ಗೆ ಸಮಾನವಾದ ತ್ರಿ ಸಿಲಿಂಡರ್ 1.5 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ತೆರಿಗೆ ವಿನಾಯಿತಿ ಗಿಟಿಸಿಕೊಳ್ಳಲು ನೆರವಾಗಲಿದೆ.

ನೋಡಲು ಚಿಕ್ಕದಾದರೂ ಹೊಸ ಬೊಲೆರೊ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇದರ 1.5 ಲೀಟರ್ ಎಂಜಿನ್ 68 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಈಗಿರುವ ಬೊಲೆರೊಗಿಂತಲೂ ಐದು ಬಿಎಚ್ ಪಿ ಜಾಸ್ತಿಯಾಗಿದೆ.

ಅಂದ ಹಾಗೆ ವಾಹನ ವಲಯದಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಹೀಂದ್ರ ಮಿನಿ ಬೊಲೆರೊ ಮುಂಬರುವ ಆಗಸ್ಟ್ ತಿಂಗಳಾಗುವಾಗ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications








