ಬರುತ್ತಿದೆ ಸ್ಕಾರ್ಪಿಯೊ ತಳಹದಿಯಲ್ಲಿ ನೂತನ ಗೇಟ್ ವೇ ಪಿಕಪ್
ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಕ್ರೀಡಾ ಬಳಕೆಯ ದೈತ್ಯ ವಾಹನ (ಎಸ್ ಯುವಿ) ನಿರ್ಮಾಣದಲ್ಲಿ ಮಾತ್ರವಲ್ಲ ಪಿಕಪ್ ಟ್ರಕ್ ವಿಭಾಗದಲ್ಲೂ ಸೈ ಎನಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿದೆ. ಈ ತನ್ನ ಜನಪ್ರಿಯ ಎಸ್ ಯುವಿ ಸ್ಕಾರ್ಪಿಯೊ ತಳಹದಿಯಲ್ಲಿ ಅತಿ ನೂತನ ಗೇಟ್ ವೇ ಪಿಕಪ್ ಟ್ರಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಸ್ಕಾರ್ಪಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ಗೇಟ್ ವೇ ಪಿಕಪ್ ಟ್ರಕ್ ನ ಪರೀಕ್ಷಾರ್ಥ ಚಾಲನೆಯು ಭರದಿಂದ ಸಾಗುತ್ತಿದೆ.

ಮುಂಭಾಗದಿಂದ ಕಣ್ಣಾಯಿಸಿದಾಗ ಮೊದಲ ನೋಟದಲ್ಲಿ ಸ್ಕಾರ್ಪಿಯೊ ಬರುತ್ತಿರುವ ಹಾಗೆ ಭಾಸವಾಗುತ್ತದೆ. ಅಂದರೆ ಮುಂಭಾಗದಲ್ಲಿ ಅಪ್ಪಟ ಸ್ಕಾರ್ಪಿಯೊ ವಿನ್ಯಾಸವನ್ನು ಮೈಗೂಡಿಸಿಕೊಂಡಿದೆ.

ನಿರ್ಮಾಣ ಸಿದ್ಧ ಆವೃತ್ತಿಯಲ್ಲೂ ಎದುರುಗಡೆಯಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹನಿಕಾಂಬ್ ಗ್ರಿಲ್ ಮತ್ತು ಶಕ್ತಿಯುತ ಬಂಪರ್ ಕಂಡುಬರುವ ಸಾಧ್ಯತೆಯಿದೆ.

ಬದಿಯಲ್ಲಿ ಸ್ಕಾರ್ಪಿಯೊದಲ್ಲಿರುವುದಕ್ಕೆ ಸಮಾನವಾದ ಅಲಾಯ್ ವೀಲ್ ಲಗತ್ತಿಸಲಾಗಿದೆ. ಕಪ್ಪು ವರ್ಣದೊಂದಿಗೆ ಕೂಡಿದ ದೇಹ ಬಣ್ಣದ ಹೊರಗಿನ ರಿಯರ್ ವ್ಯೂ ಮಿರರ್ ಮತ್ತು ಡೋರ್ ಹ್ಯಾಂಡಲ್ ಇದರಲ್ಲಿದೆ.

ಇನ್ನು ಪಿಕಪ್ ಟ್ರಕ್ ನಲ್ಲಿ ಸರಕುಗಳನ್ನು ಲೋಡ್ ಮತ್ತು ಅಲ್ ಲೋಡ್ ಮಾಡಲು ನೆರವಾಗುವ ರೀತಿಯಲ್ಲಿ ಬದಿಯಲ್ಲಿ ಸೈಡ್ ಸ್ಟೆಪ್ ಕೊಡಲಾಗಿದೆ. ಅತ್ತ ಟೈಲ್ ಲ್ಯಾಂಪ್ ನಲ್ಲೂ ಬದಲಾವಣೆ ಕಂಡುಬಂದಿಲ್ಲ.

ಹಾಗಿದ್ದರೂ ಪಿಕಪ್ ಒಳಮೈ ಬಗ್ಗೆ ಯಾವುದೇ ಚಿತ್ರ ಅಥವಾ ಮಾಹಿತಿಗಳು ಹೊರಬಂದಿಲ್ಲ. ಈ ಜೀವನ ಶೈಲಿ ವಾಹನದಲ್ಲಿ ಸ್ಕಾರ್ಪಿಯೊಗೆ ಸಮಾನವಾದ ವೈಶಿಷ್ಟ್ಯಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಎರಡು ಸಾಲುಗಳ ಆಸನ ವ್ಯವಸ್ಥೆಯನ್ನು ಕೊಡಲಾಗಿದ್ದು, ಹಾಗಾಗಿ ಐದು ಜನರಿಗೆ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಹೊಚ್ಚ ಹೊಸ ಡ್ಯಾಶ್ ಬೋರ್ಡ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ನೂತನ ಸ್ಟೀರಿಂಗ್ ವೀಲ್ ಇದರಲ್ಲಿರಲಿದೆ.

ಇನ್ನು ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ಹಿಂದುಗಡೆ ಎಂಹಾಕ್ ಲಾಂಛನ ಎದ್ದು ಕಾಣಿಸುತ್ತಿದ್ದು, ಹಾಗಾಗಿ 2.2 ಲೀಟರ್ ಎಂಹಾಕ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇದು 280 ಎನ್ ಎಂ ತಿರುಗುಬಲದಲ್ಲಿ 120 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.


Click it and Unblock the Notifications








