ಮಾರುತಿ ಗೇರ್ ಚೇಂಜ್; ರೆನೊ ಕ್ವಿಡ್ ಪ್ರತಿದಾಳಿಗೆ ಸಿದ್ಧ
ಸಣ್ಣ ಕಾರು ವಿಭಾಗದಲ್ಲಿ ರೆನೊ ಕ್ವಿಡ್ ನಿಂದ ಪ್ರಬಲ ಪ್ರತಿಸ್ಪರ್ಧೆಯನ್ನು ಎದುರಾಗಿರುವುದನ್ನು ಮನಗಂಡಿರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಈಗ ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದೆ. ಮಾರುತಿ ವಿಟಾರಾ ಬ್ರಿಝಾ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ಮಾರುತಿ ಗೇರ್ ಬದಲಾಯಿಸಿದ್ದು, ಮುಂದಿನ ತಲೆಮಾರಿನ ಆಲ್ಟೊ ಕಾರನ್ನು ಅಭಿವೃದ್ಧಿಗೊಳಿಸುತ್ತಿದೆ.

ಎಸ್ ಯುವಿ ವಿನ್ಯಾಸ ಶೈಲಿಯ ರೆನೊ ಕ್ವಿಡ್ ಸಣ್ಣ ಕಾರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅನೇಕ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡಿದೆ. ಇದರಿಂದಾಗಿ ಮಾರುತಿ ಶೇರು ಶೇಕಡಾ 48ರಿಂದ ಶೇಕಡಾ 40ಕ್ಕೆ ಕುಸಿತ ಕಂಡಿತ್ತು.

ಇದರೊಂದಿಗೆ ತಿಂಗಳೊಂದರಲ್ಲಿ 40,000 ಯುನಿಟ್ ಗಳಿಂದ 45,000 ಯುನಿಟ್ ಗಳಷ್ಟಿರುವ ಸಣ್ಣ ಕಾರು ಮಾರಾಟ ವಿಭಾಗದಲ್ಲಿ ಶೇಕಡಾ 20ರಷ್ಟು ಮಾರಾಟ ವಶಪಡಿಸಿಕೊಳ್ಳುವಲ್ಲಿ ಕ್ವಿಡ್ ಯಶ ಕಂಡಿತ್ತು.

ಮಾರುತಿ ಸುಜುಕಿ ವೈ1ಕೆ ಯೋಜನೆಯಡಿಯಲ್ಲಿ ನೂತನ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದು 2019ರ ಹಬ್ಬದ ಸಂಭ್ರಮದ ವೇಳೆಯಲ್ಲಿ ಬಿಡುಗಡೆ ಯೋಜನೆಯನ್ನಿಟ್ಟುಕೊಂಡಿದೆ.

ಆಲ್ಟೊ ಸಾಲಿನಲ್ಲಿ ಅತ್ಯಂತ ಆಕರ್ಷಕ ಹಾಗೂ ತಾಜಾನ ಕಾಪಾಡಿಕೊಳ್ಳಲಿರುವ ಮುಂದಿನ ತಲೆಮಾರಿನ ಕಾರು, ಕ್ರಾಸೋವರ್ ವಿನ್ಯಾಸ ನೀತಿಯನ್ನು ಮೈಗೂಡಿಸಿಕೊಳ್ಳಲಿದೆ.

ಬಲೆನೊ, ವಿಟಾರಾ ಬ್ರಿಝಾ ಹಾಗೂ ಸಿಯಾಝ್ ಸೆಡಾನ್ ಕಾರಿನಲ್ಲಿ ಸಾಧಿಸಿರುವ ಅದೇ ಯಶಸ್ಸನ್ನು ಹೊಸ ಆಲ್ಟೊದಲ್ಲೂ ಮುಂದುವರಿಸಲಿದೆ. ಇದು ಭಾರತ ಮಾರುಕಟ್ಟೆಯನ್ನು ಗುರಿ ಮಾಡಲಿದೆ.

ಹೊಸ ವಾಹನ ದರ್ಜೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಆಲ್ಟೊ ಕಾರನ್ನು ಸಂಪೂರ್ಣವಾಗಿ ಹೊಸ ತಳಹದಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದರ ವಿನ್ಯಾಸ, ಎಂಜಿನಿಯರಿಂಗ್ ಹಾಗೂ ದೃಢೀಕರಣವನ್ನು ಭಾರತೀಯ ತಂಡವು ಮಾಡಲಿದೆ.

ಇದೇ ಹೊತ್ತಿನಲ್ಲಿ ಮುಂಬರುವ ವರ್ಷಗಳಲ್ಲಿ ವ್ಯಾಗನಾರ್ ಹ್ಯಾಚ್ ಬ್ಯಾಕ್ ಹಾಗೂ ಸೆಲೆರಿಯೊ ಸಣ್ಣ ಕಾರಿನ ಪರಿಷ್ಕೃತ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ. ಇವೆರಡು ಅನುಕ್ರಮವಾಗಿ ವೈಸಿಎ ಹಾಗೂ ವೈಎನ್ ಸಿ ಎಂಬ ಕೋಡ್ ಪಡೆದಿದೆ.

ಕಳೆದ ಆರ್ಥಿಕ ಸಾಲಿನಲ್ಲಿ 21,500 ಯುನಿಟ್ ಗಳಿಷ್ಟಿದ್ದ ಆಲ್ಟೊ ಮಾರಾಟವು ಪ್ರಸಕ್ತ ಸಾಲಿನಲ್ಲಿ 19,000ಗಳಿಂದ 20,000 ಯುನಿಟ್ ಗಳಿಗೆ ಇಳಿಕೆ ಕಂಡಿದೆ.

ಇನ್ನೊಂದೆಡೆ ರೆನೊ ಕಳೆದೊಂದು ವರ್ಷದಲ್ಲಿ 3,000 ಯುನಿಟ್ ಗಳಿಂದ 10,000 ಯುನಿಟ್ ಗಳಿಗೆ ಏರಿಕೆ ಕಂಡಿದೆ. ಅತ್ತ ಹ್ಯುಂಡೈ ಇಯಾನ್ ಸಹ 6,000 ಯುನಿಟ್ ಗಳಿಂದ 3,000 ಯುನಿಟ್ ಗಳಿಗೆ ಕುಸಿದಿದೆ.

ಏತನ್ಮಧ್ಯೆ ಹೈಬ್ರಿಡ್ ತಂತ್ರಗಾರಿಕೆಯ ಆಲ್ಟೊ ಬಿಡುಗಡೆಗೊಳಿಸುವ ಯೋಜನೆಯ ಬಗ್ಗೆ ಸಂಸ್ಥೆ ಆಲೋಚನೆ ನಡೆಸುತ್ತಿದೆ. ಆದರೆ ಇವೆಲ್ಲವೂ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.


Click it and Unblock the Notifications








