ಬ್ರೆಜಿಲ್‌ಗೆ ರವಾನಿಸಿದ ರೆನೊ ಕ್ವಿಡ್ ಸುರಕ್ಷಿತ; ಭಾರತ ಕಡೆಗಣನೆ?
ಭಾರತದಲ್ಲಿ ನಿರ್ಮಿಸಿ ಬ್ರೆಜಿಲ್ ಗೆ ರಫ್ತು ಮಾಡುವ ರೆನೊ ಕ್ವಿಡ್ ಕಾರಿನಲ್ಲಿ ನಾಲ್ಕು ಏರ್ ಬ್ಯಾಗ್ ಜೊತೆಗೆ ಆ್ಯಂಟಿ ಬ್ರೇಕ್ ಲಾಕ್ ಮುಂತಾದ ಸುರಕ್ಷಾ ಮಾನದಂಡಗಳನ್ನು ಒದಗಿಸಲಾಗುತ್ತಿದ್ದು, ಭಾರತದ ಆವೃತ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆಯೇ ಎಂಬ ಆರೋಪ ಎದುರಾಗಿದೆ.
ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಸೇರಿದಂತೆ ಅನೇಕ ಜನಪ್ರಿಯ ಮಾದರಿಗಳು ಶೂನ್ಯ ಅಂಕ ಸಂಪಾದಿಸುವ ಮೂಲಕ ಭಾರಿ ಮುಖಭಂಗಕ್ಕೆ ಒಳಗಾಗಿದ್ದವು. ದೇಶದಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರಿನ ಭದ್ರತೆಗೆ ವಾಹನ ತಯಾರಕರು ಕಿಂಚಿತ್ತು ಗಮನ ಹರಿಸದಿರುವುದು ಖೇದಕರ ಸಂಗತಿಯಾಗಿದೆ.

ಇನ್ನೊಂದೆಡೆ ಬ್ರೆಜಿಲ್ ನಲ್ಲಿ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದ್ದು, ಎಲ್ಲ ಕಾರುಗಳು ಕನಿಷ್ಠ ಪಕ್ಷ ಏರ್ ಬ್ಯಾಗ್ ಮತ್ತು ಎಬಿಎಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಬೇಕೆಂಬ ನಿಯಮ ಜಾರಿಯಲ್ಲಿದೆ.

ಈ ನಡುವೆ ಭಾರತೀಯ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೂಚಿಸಿರುವ ಎಲ್ಲ ಸುರಕ್ಷಾ ವೈಶಿಷ್ಟ್ಯಗಳನ್ನು ಕ್ವಿಡ್ ಹೊಂದಿದೆ ಎಂದು ರೆನೊ ಸಂಸ್ಥೆಯು ಸ್ಪಷ್ಟಪಡಿಸಿದೆ.

ಭಾರತದಲ್ಲಿ ನೂತನ ಕಾರುಗಳಿಗೆ ಢಿಕ್ಕಿ ಪರೀಕ್ಷೆ 2017ನೇ ಸಾಲಿನಲ್ಲಷ್ಟೇ ಕಡ್ಡಾಯವಾಗಲಿದೆ. ಅಂದರೆ ಭಾರತ್ ಎನ್‌ಸಿಎಪಿ ಅಡಿಯಲ್ಲಿ ಎಲ್ಲ ನೂತನ ಕಾರುಗಳು ಅಪಘಾತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ಅಚ್ಚರಿಯೆಂಬಂತೆ ಭಾರತ ಮಾದರಿಗೆ ಹೋಲಿಸಿದಾಗ ಬ್ರೆಜಿಲ್ ಮಾದರಿಯ ಕ್ವಿಡ್ ಕಾರಿನಲ್ಲಿ ಪ್ರಯಾಣಿಕರ ಆರಾಮ ಮತ್ತು ಅನುಕೂಲಕ್ಕಾಗಿ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದೆ. ಇದು ಮುಂಭಾಗ ಮತ್ತು ಬದಿಯ ಏರ್ ಬ್ಯಾಗ್ ವೈಶಿಷ್ಟ್ಯಗಳನ್ನು ಪಡೆದಿದೆ.

ಒಟ್ಟಿನಲ್ಲಿ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆದು ಬರುತ್ತಿರುವ ಮಾರುಕಟ್ಟೆಯ ಹೊರತಾಗಿಯೂ ಭಾರತವನ್ನು ವಾಹನ ಸಂಸ್ಥೆಗಳು ಯಾತಕ್ಕಾಗಿ ಕಡೆಗಣಿಸುತ್ತಿದೆ ಎಂಬುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕಾಗಿದೆ.


Click it and Unblock the Notifications








