ರೆನೊ ಕ್ವಿಡ್ ಗಿಂತಲೂ ಅಗ್ಗ ದಟ್ಸನ್ ರೆಡಿ ಗೊ ?
ಇದೇ ಬರುವ 2016 ಎಪ್ರಿಲ್ 14ರಂದು ದಟ್ಸನ್ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರು ಲೋಕಾರ್ಪಣೆಯಾಗಲಿದೆ. ನವದೆಹಲಿಯಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ದಟ್ಸನ್ ರೆಡಿ ಗೊ ಜಾಗತಿಕ ಬಿಡುಗಡೆ ಕಾಣಲಿದೆ.
ಕ್ವಿಡ್ ಅದೇ ತಳಹದಿಯಲ್ಲಿ ನಿರ್ಮಾಣವಾಗಲಿರುವ ದಟ್ಸನ್ ರೆಡಿ ಗೊ, ರೆನೊ ಕಾರಿಗಿಂತಲೂ ಅಗ್ಗವಾಗಿರಲಿದೆ ಎಂಬ ಮಾತು ವಾಹನ ವಲಯಗಳಲ್ಲಿ ಕೇಳಿ ಬರುತ್ತಿದೆ. ಈ ಎಲ್ಲ ವಿಚಾರಗಳು ಹೆಚ್ಚಿನ ಆಸಕ್ತಿ ಕೆರಳಿಸಿದ್ದು, ನೂತನ ರೆಡಿ ಗೊ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ಅಂಶಗಳನ್ನು ನಾವಿಲ್ಲಿ ಹೇಳಿಕೊಡಲಿದ್ದೇವೆ.

ಇದು ದಟ್ಸನ್ ಬಜೆಟ್ ಬ್ರ್ಯಾಂಡ್ ನಲ್ಲಿ ಮಾತೃಸಂಸ್ಥೆ ನಿಸ್ಸಾನ್ ಬಿಡುಗಡೆ ಮಾಡುತ್ತಿರುವ ಮೂರನೇ ಕಾರಾಗಿದೆ. ಇದಕ್ಕೂ ಮೊದಲು ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳು ಬಿಡುಗಡೆಯಾಗಿದ್ದವು.

ತಳಹದಿ
ಚೆನ್ನೈನಲ್ಲಿ ಸ್ಥಿತಗೊಂಡಿರುವ ರನೊ-ನಿಸ್ಸಾನ್ ಘಟಕದ ಸಿಎಂಎಫ್-ಎ ತಳಹದಿಯಲ್ಲಿ ನೂತನ ರೆಡಿ ಗೊ ನಿರ್ಮಾಣವಾಗಲಿದೆ. ಇದೇ ತಳಹದಿಯಲ್ಲಿ ನಿರ್ಮಾಣವಾಗಿರುವ ರೆನೊ ಕ್ವಿಡ್ ಭಾರಿ ಯಶಸ್ಸನ್ನು ಸಾಧಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಎಂಜಿನ್ ಮತ್ತು ಗೇರ್ ಬಾಕ್ಸ್
ದಟ್ಸನ್ ರೆಡಿ ಗೊದಲ್ಲೂ ರೆನೊ ಕ್ವಿಡ್ ಕಾರಿನಲ್ಲಿರುವುದಕ್ಕೆ ಸಮಾನವಾದ 0.8 ಲೀಟರ್ ಎಸ್‌ಸಿಇ ಎಂಜಿನ್ ಬಳಕೆಯಾಗಲಿದ್ದು, 74 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಭವಿಷ್ಯದಲ್ಲಿ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಡೀಸೆಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮೈಲೇಜ್
ಸಣ್ಣ ಕಾರು ವಿಭಾಗದಲ್ಲಿ ಮೈಲೇಜ್ ಪ್ರಮುಖ ಘಟಕವೆನಿಸುತ್ತಿದ್ದು, ನೂತನ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬೆಲೆ
ಕ್ವಿಡ್ ಕಾರಿಗಿಂತಲೂ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ರೆಡಿ ಗೊ 2.50 ಲಕ್ಷ ರು.ಗಳಿಂದ 3.50 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ಮಾರುಕಟ್ಟೆ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಮಾರುತಿ ಆಲ್ಟೊ, ರೆನೊ ಕ್ವಿಡ್ ಮತ್ತು ಹ್ಯುಂಡೈ ಇಯಾನ್ ಮುಂತಾದ ಮಾದರಿಗಳಿಗೆ ನೂತನ ರೆಡಿ ಗೊ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








