ನೂತನ ಟಾಟಾ ಕಾರು 'ಟಿಯಾಗೊ' ಎಪ್ರಿಲ್ 06ರಂದು ಬಿಡುಗಡೆ
ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಅಬ್ಬರದ 'ಫೆಂಟಾಸ್ಟಿಕೊ' ಪ್ರಚಾರದ ಬಳಿಕ ಬಹುನಿರೀಕ್ಷಿತ 'ಟಾಟಾ ಟಿಯಾಗೊ' ಮುಂಬರುವ 2016 ಎಪ್ರಿಲ್ 06ರಂದು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
Also Read: ಟಾಟಾ 'ಕೈಟ್ 5' ಮನಮೋಹಕ ಕಾರು ಮೋಡಿ ಮಾಡಿತೇ?
ಅಂದಾಜು 3.5 ಲಕ್ಷ ರು.ಗಳಿಂದ 5 ಲಕ್ಷ ರು.ಗಳ ಬೆಲೆ ಪರಿಧಿಯಾಗಲಿರುವ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಮೇಲೆ ಟಾಟಾ ಮೋಟಾರ್ಸ್ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಗರಿಷ್ಠ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಪ್ರಾರಂಭದಲ್ಲಿ 'ಝಿಕಾ' ಎನಿಸಿಕೊಂಡಿದ್ದ ನೂತನ ಕಾರನ್ನು ಟಾಟಾ ಹಮ್ಮಿಕೊಂಡಿರುವ ಫೆಂಟಾಸ್ಟಿಕೊ ಹಂಟ್ ಅಭಿಯಾನದ ಮೂಲಕ ಟಿಯಾಗೊ ಎಂದು ಬದಲಾಯಿಸಲಾಗಿತ್ತು. ಇದರ ಪ್ರಮುಖ ಪ್ರಚಾರ ರಾಯಭಾರಿಯಾಗಿ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಮುಖವಾಗಿಯೂ ಭಾರತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸೆಲೆರಿಯೊ, ಹ್ಯುಂಡೈ ಗ್ರಾಂಡ್ ಐ10, ಮಾರುತಿ ಸುಜುಕಿ ವ್ಯಾಗನಾರ್ ಮತ್ತು ಇನ್ನಷ್ಟೇ ಬರಬೇಕಾಗಿರುವ ದಟ್ಸನ್ ಹ್ಯಾಚ್ ಬ್ಯಾಕ್ ಕಾರುಗಳಿಗೆ ನೂತನ ಟಿಯಾಗೊ ಪ್ರತಿಸ್ಪರ್ಧಿಯಾಗಲಿದೆ.

ನೂತನ ಟಿಯಾಗೊ ಕಾರಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಇದು ಮುಂಬರುವ ನೆಕ್ಸನ್ ಕಾಂಪಾಕ್ಟ್ ಎಸ್‌ಯುವಿ ಮತ್ತು ಕೈ 5 ಸೆಡಾನ್ ಕಾರಿನಲ್ಲೂ ಕಂಡುಬರಲಿದೆ.

ಹೊಸ ಆಕರ್ಷಕ ಹೊರಮೈ, ಅಂದವಾದ ಡ್ಯಾಶ್ ಬೋರ್ಡ್, ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ, 17 ಇಂಚುಗಳ ಅಲಾಯ್ ವೀಲ್, ಆಂಡ್ರಾಯ್ಡ್ ಫೋನ್ ಸಂಪರ್ಕಿತ ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್, ಜ್ಯೂಕ್ ಕಾರ್ ಆಪ್ ಇತ್ಯಾದಿ ವೈಶಿಷ್ಟ್ಯಗಳು ಇದರಲ್ಲಿರಲಿದೆ.

ನೂತನ ಟಿಯಾಗೊ ಕಾರಿನಲ್ಲಿರುವ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ರೀತಿ 1.0 ಲೀಟರ್ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡರಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಕಂಡುಬರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಟಾಪ್ ಎಂಡ್ ವೆರಿಯಂಟ್ ನಲ್ಲಿ ಚಾಲಕ ಹಾಗೂ ಮುಂಭಾಗದ ಪ್ರಯಾಣಿಕ ಬದಿಯ ಏರ್ ಬ್ಯಾಗ್, ಸೀಟು ಬೆಲ್ಟ್, ರಿಮೋಟ್ ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಕ್ಲಚ್ ಲಾಕ್ ಮತ್ತು ಇಂಮೊಬಿಲೈಜರ್ ಸೇವೆಯು ಲಭ್ಯವಾಗಲಿದೆ.

ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ
ಟಾಟಾ ಟಿಯಾಗೊ; ಗುಣ ದೋಷ ವಿಮರ್ಶೆ


Click it and Unblock the Notifications