ಟಾಟಾದ ನಂ.1 ಕಾರು ಟಿಯಾಗೊಗೆ ಭಾರಿ ಡಿಮ್ಯಾಂಡ್!
ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚು ಬೇಡಿಕೆ ದಾಖಲಾಗಿದೆ.
2016 ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿರುವ ಟಾಟಾ ಟಿಯಾಗೊ ಅತಿ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತನ್ಮೂಲಕ ಟಾಟಾ ಮೋಟಾರ್ಸ್ ಸಂಸ್ಥೆಯ ಅತ್ಯಂತ ಯಶಸ್ಸಿನ ಕಾರೆನಿಸಿಕೊಂಡಿದೆ.

2016 ಅಕ್ಟೋಬರ್ ತಿಂಗಳಲ್ಲಿ 6,000 ಯುನಿಟ್ ಗಳ ಮಾರಾಟವನ್ನು ದಾಟಿರುವ ಟಾಟಾ ಟಿಯಾಗೊ, ಇದುವರೆಗಿನ ಸರ್ವಶ್ರೇಷ್ಠ ಮಾರಾಟವನ್ನು ಗಿಟ್ಟಿಸಿಕೊಂಡಿದೆ.

ಅಷ್ಟೇ ಯಾಕೆ ಕಳೆದ ಮಾರು ವರ್ಷಗಳ ಅವಧಿಯಲ್ಲಿ ಟಾಟಾದ ನಿರ್ದಿಷ್ಟ ಮಾದರಿಯೊಂದು ಇದೇ ಮೊದಲ 6,000 ಯುನಿಟ್ ಗಳ ಮಾರಾಟವನ್ನು ದಾಟಿದೆ.

ಅಕ್ಟೋಬರ್ ತಿಂಗಳಲ್ಲಿ 6108ರಷ್ಟು ಟಿಯಾಗೊ ಕಾರುಗಳನ್ನು ಮಾರಾಟ ಮಾಡುವಲ್ಲಿ ಟಾಟಾ ಯಶಸ್ವಿಯಾಗಿದೆ. ಈ ಮೂಲಕ ಪ್ರತಿ ತಿಂಗಳಲ್ಲೂ ಏರುಗತಿಯನ್ನು ಸಾಧಿಸುತ್ತಿದೆ.

ಒಟ್ಟಾರೆಯಾಗಿ 16,311 ಯುನಿಟ್ ಗಳ ಮಾರಾಟ ದಾಖಲಿಸಿರುವ ಟಾಟಾ ಮೋಟಾರ್ಸ್, ಶೇಕಡಾ 28ರಷ್ಟು ಪ್ರಗತಿಯನ್ನು ಸಾಧಿಸಿದೆ.

ಇದುವರೆಗೆ ಟಾಟಾ ಟಿಯಾಗೊ 50,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಪೈಕಿ 25,000 ದಷ್ಟು ಕಾರುಗಳನ್ನು ಗ್ರಾಹಕರಿಗೆ ಹಂಚಿಕೊಳ್ಳಲಾಗಿದೆ.

ಗುಜರಾತ್ ನಲ್ಲಿರುವ ತನ್ನ ಘಟಕದಲ್ಲಿ ಟಿಯಾಗೊ ನಿರ್ಮಿಸುತ್ತಿರುವ ಟಾಟಾ ಸಂಸ್ಥೆಯು ಬೇಡಿಕೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯಕ್ಕೆ ಟಾಟಾ ಟಿಯಾಗೊ ಬುಕ್ ಮಾಡಿದ ಗ್ರಾಹಕನೋರ್ವ ಮೂರರಿಂದ ನಾಲ್ಕು ತಿಂಗಳುಗಳಷ್ಟು ಕಾಲ ಕಾಯಬೇಕಿದೆ.

ಅಂದ ಹಾಗೆ ಟಾಟಾ ಟಿಯಾಗೊ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಇದರ 1.2 ಲೀಟರ್ ತ್ರಿ ಸಿಲಿಂಡರ್ ಎಂಜಿನ್ 83.8 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನೊಂದೆಡೆ 1.05 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ 69 ಅಶ್ವಶಕ್ತಿಯನ್ನು ನೀಡಲಿದೆ.

ಇವೆರಡು ಫೈವ್ ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ. ಭಾರತದಲ್ಲಿ ಟಾಟಾ ಟಿಯಾಗೊ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.20 ಲಕ್ಷ ರು.ಗಳಿಂದ 5.67 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.


Click it and Unblock the Notifications








