50,000 ಬುಕ್ಕಿಂಗ್ಸ್; ಟಾಟಾದ ಜನಪ್ರಿಯ ಕಾರು ಯಾವುದೆಂಬುದನ್ನು ಹೇಳಬಲ್ಲಿರಾ?
ಟ್ಯಾಕ್ಸಿ ಕಾರೆಂಬ ಅಪಖ್ಯಾತಿಯನ್ನು ತೊಳಗಿಸಿರುವ ಟಾಟಾ ಕಾರೊಂದು ಪ್ರಯಾಣಿಕ ಮಾರುಕಟ್ಟೆಗೆ ಎಂಟ್ರಿ ಸ್ವಲ್ಪ ಸಮಯವೇ ಕಳೆದು ಹೋಗಿದೆ. ಅಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲಿ 50,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ಯಾವ ಟಾಟಾ ಕಾರಿನ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ? ಉತ್ತರಕ್ಕಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ.

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಎಪ್ರಿಲ್ 06ರಂದು ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಈಗ ಬಿಡುಗಡೆಯಾದ ಏಳು ತಿಂಗಳೊಳಗೆ 50,000 ಬುಕ್ಕಿಂಗ್ಸ್ ಗಳನ್ನು ದಾಟಿದೆ.

ಪ್ರತಿ ತಿಂಗಳಲ್ಲಿ ಸರಾಸರಿ 5,000ದಷ್ಟು ಬುಕ್ಕಿಂಗ್ ದಾಖಲಾಗುತ್ತಿದೆ. ಈ ಪೈಕಿ ಟಿಯಾಗೊದ ಕೆಲವು ನಿರ್ದಿಷ್ಟ ವೆರಿಯಂಟ್ ಗಳಿಗೆ ಕಾಯುವಿಕೆ ಅವಧಿ ನಾಲ್ಕು ತಿಂಗಳಿಗೂ ಹೆಚ್ಚು ವಿಸ್ತರಿಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ 4,557 ಯುನಿಟ್ ಗಳಷ್ಟು ಮಾರಾಟವಾಗುವ ಮೂಲಕ ಟಿಯಾಗೊ ಗಮನಾರ್ಹ ಸಾಧನೆ ಮಾಡಿತ್ತು. ಇದು ಟಾಟಾ ಪಾಲಿಗೆ ಅತ್ಯಂತ ಯಶಸ್ಸಿನ ಕಾರೆನಿಸಿಕೊಂಡಿದೆ.

ಸದ್ಯಕ್ಕೆ ಟಾಟಾ ಟಿಯಾಗೊ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ನಿಕಟ ಪ್ರತಿಸ್ಪರ್ಧೆಯನ್ನು ಗಮನಿಸಿರುವ ಟಾಟಾ, ನಿಕಟ ಭವಿಷ್ಯದಲ್ಲೇ ಟಿಯಾಗೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಅತ್ತ ಹೆಚ್ಚು ಶಕ್ತಿಶಾಲಿ ಟಿಯಾಗೊ ಸ್ಪೋರ್ಟ್ ಕಾರನ್ನು ಬಿಡುಗಡೆ ಮಾಡಲು ಟಾಟಾ ಯೋಜನೆಯಿರಿಸಿಕೊಂಡಿದೆ. ತನ್ಮೂಲಕ ಟಿಯಾಗೊ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದೆ.

1.2 ಲೀಟರ್ ತ್ರಿ ಸಿಲಿಂಡರ್ ಆಲ್ ಅಲ್ಯೂಮಿನಿಯಂ ರೆವೊಟ್ರಾನ್ ಎಂಜಿನ್ ನಿಯಂತ್ರಿಸಲ್ಪಡುವ ಟಾಟಾ ಟಿಯಾಗೊ 114 ಎನ್ ಎಂ ತಿರುಗುಬಲದಲ್ಲಿ 85 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಹಾಗೆಯೇ ಇದರಲ್ಲಿರುವ 1.05 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬಲ್ಲ ಮೂಲಗಳ ಪ್ರಕಾರ ಟಾಟಾ ಟಿಯಾಗೊ ಸ್ಪೋರ್ಟ್ ಆವೃತ್ತಿಯು ಹೆಚ್ಚು ಶಕ್ತಿಶಾಲಿ 1.2 ಲೀಟರ್ ಟರ್ಬೊಚಾರ್ಜರ್ ಎಂಜಿನ್ ಪಡೆಯಲಿದ್ದು, 120 ಅಶ್ವಶಕ್ತಿ ನೀಡಲಿದೆ.

ಇದಕ್ಕೂ ಮೊದಲು ಬೋಲ್ಟ್ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಿರಿಸಿಕೊಳ್ಳಲಾಗಿತ್ತು. ಆದರೆ ಕಳಪೆ ಮಾರಾಟದ ಹಿನ್ನಲೆಯಲ್ಲಿ ಈ ಸ್ಥಾನವನ್ನು ಟಿಯಾಗೊ ಕಸಿದುಕೊಳ್ಳಲಿದೆ.

ಇಲ್ಲಿಗೂ ಟಾಟಾ ಯೋಜನೆ ಕೊನೆಗೊಳ್ಳುವುದಿಲ್ಲ. ಟಿಯಾಗೊ ತಳಹದಿಯಲ್ಲೇ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯು ಟಾಟಾ ಬಳಿಯಲ್ಲಿದೆ.

ನೀವಿಲ್ಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಟಾಟಾ ಕೈಟ್ 5 ಎಂಬ ಕಾನ್ಸೆಪ್ಟ್ ಕಾರನ್ನು ನೆನಪಿಸಿಕೊಳ್ಳಬಹುದಾಗಿದೆ. ಇದು 2017 ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿದೆ.

ಒಟ್ಟಿನಲ್ಲಿ ಪ್ರಯಾಣಿಕ ಕಾರು ವಿಭಾಗದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಹೊರಟಿರುವ ದೇಶದ ಅತಿ ದೊಡ್ಡ ಸಂಸ್ಥೆಯು ಬದಲಾದ ಮಾರುಕಟ್ಟೆಯಲ್ಲಿ ನೂತನ ತಂತ್ರಗಾರಿಕೆಗಳಿಗೆ ಮೊರೆ ಹೋಗುತ್ತಿದೆ.

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಟಾಟಾ ಟಿಯಾಗೊ ಪೆಟ್ರೋಲ್ ಶ್ರೇಣಿಯ ಕಾರುಗಳು 3.20 ಲಕ್ಷ ರು.ಗಳಿಂದ 4.81 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಹಾಗೆಯೇ ಡೀಸೆಲ್ ಆವೃತ್ತಿಗಳು 3.94 ಲಕ್ಷ ರು.ಗಳಿಂದ 5.60 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

ಇವನ್ನೂ ಓದಿ:
1. ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ ದೀಪಾವಳಿ ಆಫರ್
2. ದೊಡ್ಡ ನ್ಯಾನೋ 'ಪೆಲಿಕನ್' ಟೆಸ್ಟಿಂಗ್; ಬಿಡುಗಡೆ, ವೈಶಿಷ್ಟಗಳೇನು ?
3. ಹೊಸ ಟಾಟಾ ಹೆಕ್ಸಾದಲ್ಲಿದೆ ರಹಸ್ಯ ವೈಶಿಷ್ಟ್ಯ; ಏನದು ಗೊತ್ತಾ?


Click it and Unblock the Notifications








