ಇನ್ನೋವಾಗೆ ಭಾರಿ ಬೇಡಿಕೆ; 3 ವಾರಗಳಲ್ಲೇ 18,000 ಬುಕ್ಕಿಂಗ್ಸ್
ಇತ್ತೀಚೆಗಷ್ಟೇ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಅತಿ ನೂತನ ಎರಡನೇ ತಲೆಮಾರಿನ ಇನ್ನೋವಾ ಕ್ರೈಸ್ಟಾ ಬಹು ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈಗ ಬಂದಿರುವ ಮಾಹಿತಿಗಳ ಪ್ರಕಾರ ಟೊಯೊಟಾ ಇನ್ನೋವಾ ಕ್ರೈಸ್ಟಾಗೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ಬಿಡುಗಡೆಯಾದ ಮೂರು ವಾರಗಳಲ್ಲೇ 18,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ.
ಹಳೆಯ ಮಾದರಿಗಿಂತಲೂ ಗರಿಷ್ಠ ವೈಶಿಷ್ಟ್ಯಗಳನ್ನು ಪಡೆದಿರುವ ಇನ್ನೋವಾ ಮಗದೊಂದು ವಾಹನ ಪ್ರೇಮಿಗಳ ನೆಚ್ಚಿನ ಕಾರೆನಿಸಿಕೊಳ್ಳುತ್ತಿದೆ. ಟೊಯೊಟಾ ಇನ್ನೋವಾ ಕ್ರೈಸ್ಟಾ ಬೆಂಗಳೂರು ಪ್ರಾರಂಭಿಕ ಬೆಲೆ 14.17 ಲಕ್ಷ ರು.ಗಳಿಂದ ಟಾಪ್ ಎಂಡ್ ವೆರಿಯಂಟ್ 21.12 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಜಿ, ಜಿಎಕ್ಸ್, ವಿಎಕ್ಸ್ ಮತ್ತು ಝಡ್ ಎಕ್ಸ್ ಗಳೆಂಬ ನಾಲ್ಕು ವೆರಿಯಂಟ್ ಗಳಲ್ಲಿ ಏಳು ಮತ್ತು ಎಂಟು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಕೆಲವು ನಿರ್ದಿಷ್ಟ ವೆರಿಯಂಟ್ ಗಳ ಕಾಯುವಿಕೆ ಅವಧಿ ನಾಲ್ಕು ತಿಂಗಳುಗಳ ವರೆಗೆ ಏರಿಕೆಯಾಗಿದೆ.
ಪ್ರಸ್ತುತ ಕರ್ನಾಟಕದ ಬಿಡದಿಯಲ್ಲಿರುವ ಘಟಕದಲ್ಲಿ ಪ್ರತಿ ತಿಂಗಳಲ್ಲಿ 7,000ದಷ್ಟು ಇನ್ನೋವಾ ಕಾರುಗಳನ್ನು ನಿರ್ಮಿಸಲಾಗುತ್ತಿದೆ. ಈಗ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಿರ್ಮಾಣ ಸಾಮರ್ಥ್ಯ ವೃದ್ಧಿಸಲು ಟೊಯೊಟಾ ಇರಾದೆ ವ್ಯಕ್ತಪಡಿಸಿದೆ.
ಈ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2 ಲೀಟರ್ ಗಿಂತಲೂ ಹೆಚ್ಚು ಇಂಧನ ಸಾಮರ್ಥ್ಯದ ಕಾರುಗಳಿಗೆ ನಿಷೇಧ ಹೇರಿರುವುದು ಟೊಯೊಟಾಗೆ ಬಲವಾದ ಹೊಡೆತ ನೀಡುವಂತಾಗಿದೆ. ಸರಕಾರದ ಈ ನೀತಿಯ ವಿರುದ್ಧ ಇನ್ನೋವಾ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
2.4 ಲೀಟರ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಗಳ ಆಯ್ಕೆಗಳಲ್ಲಿ ಲಭ್ಯವಿರುವ ಇನ್ನೋವಾ ಆರು ಸ್ಪೀಡ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ. ಚಾಲಕರಿಗೆ ಇಕೊ ಮತ್ತು ಪವರ್ ಗಳೆಂಬ ಎರಡು ಚಾಲನಾ ವಿಧಗಳನ್ನು ಆಯ್ಕೆ ಮಾಡಬಹುದಾಗಿದೆ.


Click it and Unblock the Notifications














































































