ಬಿಡುಗಡೆಗೂ ಮುನ್ನ ಟೊಯೊಟಾ ಫಾರ್ಚ್ಯುನರ್ ಶಕ್ತಿ ಪ್ರದರ್ಶನ
ನೂತನ ಟೊಯೊಟಾ ಫಾರ್ಚ್ಯುನರ್ ಭಾರತದಲ್ಲಿ ನವೆಂಬರ್ 07ರಂದು ಬಿಡುಗಡೆಯಾಗಲಿದೆ.
ಇನ್ನೋವಾ ಕ್ರೈಸ್ಟಾ ಯಶಸ್ಸನ್ನು ಮುಂದುವರಿಸುವ ಇರಾದೆಯಲ್ಲಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, ಅತಿ ನೂತನ ಫಾರ್ಚ್ಯನರ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮುಂದಿನ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಭಾರತದಲ್ಲಿ 2016 ನವೆಂಬರ್ 07ರಂದು ಬಿಡುಗಡೆಯಾಗಲಿದ್ದು, ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಇದರಂತೆ ಡೀಲರ್ ಶಿಪ್ ಗಳಲ್ಲಿ 2016 ಟೊಯೊಟಾ ಫಾರ್ಚ್ಯುನರ್ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಆಸಕ್ತ ಗ್ರಾಹಕರು ಮುಂಗಡವಾಗಿ ಎರಡು ಲಕ್ಷ ರುಪಾಯಿಗಳನ್ನು ಪಾವತಿಸಬೇಕಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಅತಿ ಹೆಚ್ಚು ತಂತ್ರಗಾರಿಕೆಗಳಿಗೆ ಹೆಚ್ಚಿನ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು. ಅದೇ ರೀತಿ ನೂತನ ಫಾರ್ಚ್ಯುನರ್ ಸಹ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎ-ಟಿಆರ್ ಸಿ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಗಳನ್ನು ಪಡೆಯಲಿದೆ.

ಇಲ್ಲಿಗೆ ವೈಶಿಷ್ಟ್ಯಗಳು ಕೊನೆಗೊಳ್ಳುವುದಿಲ್ಲ. ಡೌನ್ ಹಿಲ್ ಅಸಿಸ್ಟ್ ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಿಕ್ ಟೈಲ್ ಗೇಟ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು, ಕ್ರೂಸ್ ಕಂಟ್ರೋಲ್, ಟಿ ಕನೆಕ್ಟ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಸ್ಯಾಟ್-ನೇವ್ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯಗಳಿರಲಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಫಾರ್ಚ್ಯುನರ್ ನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಆಧುನಿಕತೆ ಶೈಲಿಗೆ ತಕ್ಕಂತೆ ಹೆಚ್ಚು ನಿಖರವಾದ ವಿನ್ಯಾಸವು ಕಂಡುಬರಲಿದೆ.

ನೂತನ ಟೊಯೊಟಾ ಫಾರ್ಚ್ಯುನರ್ ಅದ್ಭುತ ರಸ್ತೆ ಸಾನಿಧ್ಯವನ್ನು ಕಾಪಾಡಿಕೊಂಡಿದೆ. ಐಷಾರಾಮಿ ಕಾರು ಪ್ರಿಯರಿಗೆ ಇದಕ್ಕಿಂತಲೂ ಹೆಚ್ಚು ಇನ್ನೇನು ಬೇಕು?

ಕಾರಿನ ಹಿಂಭಾಗದಲ್ಲೂ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಹಿಂಭಾಗದ ಟೈಲ್ ಲ್ಯಾಂಪ್ ಮತ್ತು ವಿನ್ಯಾಸಗಳು ಪ್ರಿಮಿಯಂ ಎಸ್ ಯುವಿ ಸ್ವಭಾವವನ್ನು ಪ್ರತಿಪಾದಿಸಲಿದೆ.

ಇನ್ನೋವಾಗೆ ಸಮಾನವಾಗಿರುವ ಎಂಜಿನ್ ತಾಂತ್ರಿಕತೆಗಳು ಇದರಲ್ಲಿರಲಿದೆ. ನೂತನ ಟೊಯೊಟಾ ಫಾರ್ಚ್ಯುನರ್ ನಲ್ಲಿರುವ 2.4 ಲೀಟರ್ ಜಿಡಿ ಡೀಸೆಲ್ ಎಂಜಿನ್ 343 ಎನ್ ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹಾಗೆಯೇ ಮತ್ತಷ್ಟು ಶಕ್ತಿಶಾಲಿ 2.8 ಲೀಟರ್ ಜಿಡಿ ಡೀಸೆಲ್ ಎಂಜಿನ್ 360 ಎನ್ ಎಂ ತಿರುಗುಬಲದಲ್ಲಿ 172 ಅಶ್ವಶಕ್ತಿಯನ್ನು ನೀಡಲಿದೆ.

ಇದರ 2.4 ಲೀಟರ್ ಎಂಜಿನ್ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಂತೆಯೇ 2.8 ಲೀಟರ್ ಎಂಜಿನ್ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಇನ್ನು ದೆಹಲಿಯಂತಹ ನಗರಗಳಲ್ಲಿ ಡೀಸೆಲ್ ಕಾರುಗಳಿಗೆ ನಿಷೇಧ ಹೇರಿರುವ ಪ್ರಕರಣವನ್ನು ಗಮನಿಸಿರುವ ಟೊಯೊಟಾ, ಇನ್ನೋವಾ ಕ್ರೈಸ್ಟಾಗೆ ತರಹನೇ 2.7 ಲೀಟರ್ ಪೆಟ್ರೋಲ್ ಎಂಜಿನ್ ಸಹ ಲಗತ್ತಿಸುವ ಸಾಧ್ಯತೆಯಿದೆ.

ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಫಾರ್ಚ್ಯುನರ್ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯಿರಲಿದೆ.


Click it and Unblock the Notifications








