ಇನ್ಮುಂದೆ ಪೆಟ್ರೋಲ್, ಡಿಸೇಲ್ ಬೆಲೆಗಳು ದಿನಂಪ್ರತಿ ಏರಿಳಿತ- ಇದು ಗ್ರಾಹಕರಿಗೆ ಲಾಭವೋ..ನಷ್ಟವೋ?
ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆ ಆಧರಿಸಿ ಇನ್ಮುಂದೆ ದಿನಂಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗಲಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆ ಆಧರಿಸಿ ಇನ್ಮುಂದೆ ದಿನಂಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗಲಿವೆ.
ಮೇ 16ರಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನಂಪ್ರತಿ ಪರಿಷ್ಕಣೆಗೊಳ್ಳಲಿದ್ದು, ಮೊದಲ ಹಂತದಲ್ಲಿ ಪ್ರಮುಖ ಐದು ನಗರಗಳಲ್ಲಿ ಈ ನಿಯಮ ಜಾರಿಗೆ ಬರುತ್ತಿದೆ.

ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸುವ ಬಗ್ಗೆ ಈ ಹಿಂದೆ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ್ದವು. ಇದೀಗ ಮಹತ್ವದ ಪ್ರಸಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಸದ್ಯಕ್ಕೆ ಮೊದಲ ಹಂತದಲ್ಲಿ ಪುದುಚೇರಿ, ವೈಜಾಕ್, ಉದಯ್‌ಪುರ್, ಜಮಶೇಡ್‌ಪುರದಲ್ಲಿ ಮತ್ತು ಚಂಡಿಘರ್ ನಗರಗಳಲ್ಲಿ ಪ್ರತಿದಿನವೂ ತೈಲ ಪರಿಷ್ಕರಣೆ ನಡೆಸಲು ಒಪ್ಪಿಗೆ ದೊರೆತಿದೆ.

ನಿಯಮದಂತೆ ಸದ್ಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆಗಳನ್ನು ಪ್ರತಿದಿನವೂ ಪರಿಷ್ಕರಿಸಲಾಗುತ್ತಿದ್ದು, ಇದೇ ರೀತಿಯ ನಿಯಮವನ್ನು ಇಂಧನ ಬೆಲೆ ಪರಿಷ್ಕರಣೆಗೂ ಅನ್ವಯ ಮಾಡುವಂತೆ ತೈಲ ಕಂಪನಿಗಳು ಕೇಂದ್ರದ ಮೊರೆ ಹೋಗಿದ್ದವು.

ಸದ್ಯ ಐದು ನಗರಗಳಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಪ್ರತಿದಿನ ತೈಲ ದರ ಪರಿಷ್ಕರಣೆ ನಿರ್ಣಯವು ಪೆಟ್ರೋಲಿಯಂ ಸಂಸ್ಥೆಗಳಿಗೆ ಲಾಭವಾದಲ್ಲಿ ಮುಂಬರುವ ದಿನಗಳಲ್ಲಿ ದೇಶದ ಎಲ್ಲ ನಗರಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಇದೀಗ 15 ದಿನಗಳಿಗೆ ಒಮ್ಮೆ ತೈಲ ದರ ಪರಿಷ್ಕರಣೆಯಾಗುತ್ತಿರುವುದರಿಂದ ತೈಲ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದ್ದು, ಈ ಕಾರಣಕ್ಕೆ ದಿನಂಪ್ರತಿ ತೈಲ ದರ ಬದಲಾವಣೆ ತರಲು ನಿರ್ಧರಿಸಲಾಗಿದೆ.

ಗ್ರಾಹಕರಿಗೆ ಲಾಭವೋ? ನಷ್ಟವೋ?
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಅನುಗುಣವಾಗಿ ಪ್ರತಿದಿನ ದರಗಳು ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ. ಯಾಕೇಂದ್ರೆ ಆ ದಿನದ ಕಚ್ಚಾ ತೈಲದ ಬೆಲೆ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗುತ್ತವೆ.

ಹೀಗಾಗಿ ಗ್ರಾಹಕರಿಗೆ ಇದು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಹೊಸ ನಿಯಮ ಕಾರ್ಯರೂಪಕ್ಕೆ ಬಂದ ನಂತವಷ್ಟೇ ಈ ಯೋಜನೆಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.


Click it and Unblock the Notifications








