ವಾಹನ ಸವಾರರ ಜೀವ ರಕ್ಷಕ ಎಬಿಎಸ್ ತಂತ್ರಜ್ಞಾನದ ಬಗ್ಗೆ ನಿಮಗೆ ಎಷ್ಟು ಗೊತ್ತು?
ಇತ್ತೀಚೆಗೆ ಹೊಸ ವಾಹನ ಖರೀದಿ ವೇಳೆ ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಪ್ರಶ್ನೆ ಅಂದ್ರೆ ಅದು ಎಬಿಎಸ್ ಇರುವ ವಾಹನ ಖರೀದಿ ಮಾಡೋದಾ ಇಲ್ಲಾ ಕಡಿಮೆ ಬೆಲೆಗೆ ಲಭ್ಯವಿರುವ ಎಬಿಎಸ್ ಇಲ್ಲದ ವಾಹನ ಖರೀದಿ ಮಾಡೋದಾ ಎನ್ನುವ ಗೊಂದಲ ಇದ್ದೆ ಇರುತ್ತೆ. ಯಾಕೆಂದ್ರೆ ಎಬಿಎಸ್ ಮಹತ್ವದ ಗೊತ್ತಿಲ್ಲದ ಗ್ರಾಹಕರು ಸಾಮಾನ್ಯವಾಗಿ ಕಡಿಮೆ ಬೆಲೆಗೆ ಲಭ್ಯವಿರುವ ಎಬಿಎಸ್ ಇಲ್ಲದ ವಾಹನಗಳನ್ನೇ ಹೆಚ್ಚು ಖರೀದಿ ಮಾಡುತ್ತಿದ್ದು, ಹೀಗಾಗಿ ವಾಹನ ಸವಾರರ ಸುರಕ್ಷತೆಗೆ ಸಹಕಾರಿಯಾಗಿರುವ ಎಬಿಎಸ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಎಂಬುವುದು ನಮ್ಮ ಆಶಯ.

ಎಬಿಎಸ್(ಆ್ಯಂಟಿ ಬ್ರೇಕ್ ಸಿಸ್ಟಂ) ತಂತ್ರಜ್ಞಾನವು ಇತ್ತೀಚೆಗೆ ಪರಿಚಯಿಸಲಾದ ಹೊಸ ಸುರಕ್ಷಾ ಸೌಲಭ್ಯ ಅಂದುಕೊಂಡಿದ್ದರೇ ತಪ್ಪು. ಎಬಿಎಸ್ ತಂತ್ರಜ್ಞಾನವು ಮಾರುಕಟ್ಟೆಗೆ ಬಂದು ಅದಾಗಲೇ 40 ವರ್ಷಗಳೇ ಗತಿಸಿದ್ದು, ವಾಹನ ಸವಾರರ ಜೀವರಕ್ಷಕವಾಗಿರುವ ಈ ಸೌಲಭ್ಯವನ್ನು ವಾಹನಗಳಲ್ಲಿ ಕಡ್ಡಾಯಗೊಳಿಸಲು ಇದುವರೆಗೂ ಸಾಧ್ಯವಾಗಿಲ್ಲ ಅನ್ನುವುದೇ ಬೇಸರದ ಸಂಗತಿ. ಕೇವಲ ವಾಹನ ಸವಾರರಿಗೆ ಅಷ್ಟೇ ಅಲ್ಲದೇ ಅಮಾಯಕರ ಪ್ರಾಣ ಉಳಿಸಲು ನೆರವಾಗಲಿರುವ ಎಬಿಎಸ್ ಬಗ್ಗೆ ನಿಮಗೆ ಗೊತ್ತಿರದ ಹಲವು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ...

1950ರಲ್ಲೇ ಈ ಬಗ್ಗೆ ಸಂಶೋಧನೆ..!
ಹೌದು, ಎಬಿಎಸ್ ತಂತ್ರಜ್ಞಾನವು 1950ರಲ್ಲೇ ಮನ್ನಲೆಗೆ ಬಂದಿದ್ದು, ಮೊದಮೊದಲು ಈ ಸುರಕ್ಷಾ ಸೌಲಭ್ಯವನ್ನು ರೈಲು ಮತ್ತು ವಿಮಾನಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. ರೈಲುಗಳು ವೇಗದ ಸಂದರ್ಭದಲ್ಲೂ ಕಡಿಮೆ ಅವಧಿಯಲ್ಲಿ ನಿಲುಗಡೆಗೆ ಮತ್ತು ವಿಮಾನಗಳು ರನ್ ವೇ ವೇಳೆ ನಿಯಂತ್ರಣ ತೆಗೆದುಕೊಳ್ಳಲು ಇದರ ಆರಂಭವಾಯ್ತು.

ತದನಂತರ ಈ ಬಗ್ಗೆ ಆಸಕ್ತಿ ತೊರಿದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ಸುರಕ್ಷಾ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದಲ್ಲದೇ ಗ್ರಾಹಕರ ಬಳಿ ಈ ಬಗ್ಗೆ ಅರಿವು ಮೂಡಿಸ ತೊಡಗಿದವು. ಇದರ ಪರಿಣಾಮವೇ 1978ರಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮೊದಲ ಬಾರಿಗೆ ತನ್ನ ಡಬ್ಲ್ಯು116 ಕಾರುಗಳಲ್ಲಿ ಈ ಸೌಲಭ್ಯವನ್ನು ಅಧಿಕೃತವಾಗಿ ಬಳಕೆ ಮಾಡಿತು.

ಇದಾದ ಬಳಿಕ ಎಬಿಎಸ್ ತಂತ್ರಜ್ಞಾನದಲ್ಲಿ ಮತ್ತಷ್ಟು ಬದಲಾವಣೆ ಹೊರತರಲು ಮುಂದಾದ ಬಾಷ್ ಮತ್ತು ಡೈಮ್ಲರ್ ಸಂಸ್ಥೆಗಳು ವಿವಿಧ ಮಾದರಿಯ ಎಬಿಎಸ್ ಸೌಲಭ್ಯಗಳನ್ನು ಪರಿಚಯಿಸಿದ್ದಲ್ಲದೇ ಪ್ರಯಾಣಿಕ ಕಾರುಗಳು ಮತ್ತು ಸೂಪರ್ ಬೈಕ್ ಮಾದರಿಗಳಲ್ಲೂ ಇದರ ಬಳಕೆಯನ್ನು ಹೆಚ್ಚಿಸಿದವು.

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?
ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ದೇಶದ ವಾಹನ ಉತ್ಪಾದನಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುವ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಇನ್ನು ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಎಬಿಎಸ್ ಅಳವಡಿಕೆಯಿಂದ ಬೆಲೆ ಹೆಚ್ಚಳವಾದ್ರೆ ಬೇಡಿಕೆ ತಗ್ಗಲಿದೆ ಎನ್ನುವ ಭಯದಿಂದ ಆಯ್ಕೆ ರೂಪದಲ್ಲಿ ನೀಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಆದ್ರೆ ಎಬಿಎಸ್ ಇಲ್ಲದ ವಾಹನಗಳಿಗೂ ಮತ್ತು ಎಬಿಎಸ್ ಸಹಿತ ವಾಹನಗಳಿಗೂ ಹೋಲಿಕೆ ಮಾಡಿದಾಗ ಎಬಿಎಸ್ ಸಹಿತ ವಾಹನಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆ ನೀಡುವುದರಲ್ಲಿ ಶಕ್ತವಾಗಿದ್ದು, ಬೆಲೆ ಹೆಚ್ಚಳವಾಗುತ್ತೆ ಎನ್ನುವ ಒಂದೇ ಒಂದು ಉದ್ದೇಶದಿಂದ ಎಬಿಸ್ ರಹಿತ ವಾಹನಗಳನ್ನು ಖರೀದಿಸುವುದು ಅಪಾಯದ ಮೊದಲ ಹೆಜ್ಜೆ ಅನ್ನುವುದನ್ನ ಗ್ರಾಹಕರು ಅರಿತುಕೊಳ್ಳಬೇಕು.

ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ನಿರ್ಧಾರ..!
ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ಅಂದ್ರೆ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯು ಪ್ರಸ್ತುತ ದಿನಗಳಲ್ಲಿ ಮಹತ್ವ ಎನ್ನಿಸಲಿದೆ.

ಕೇಂದ್ರ ಸರ್ಕಾರವು 2019ರ ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಪ್ರತಿಯೊಂದು ವಾಹನಕ್ಕೂ ಎಬಿಎಸ್ ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದ ಅಪಘಾತಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ.
ಹಾಗಾದ್ರೆ ಎಬಿಎಸ್‌ನಿಂದ ವಾಹನ ಸವಾರರಿಗೆ ಏನು ಪ್ರಯೋಜನ? ಇದರಿಂದ ಅಪಘಾತಗಳ ಸಂಖ್ಯೆ ಹೇಗೆ ತಗ್ಗಿಸಬಹುದು ಎನ್ನುವುದನ್ನು ತಿಳಿಯುವುದು ಅತ್ಯಅವಶ್ಯಕವಾಗಿದೆ. ಈ ವಿಡಿಯೋ ನೋಡಿದಲ್ಲಿ ನಿಮಗೆ ಎಬಿಎಸ್ ತಂತ್ರಜ್ಞಾನದ ಮಹತ್ವ ಏನು ಅನ್ನುವುದನ್ನ ಅರಿಯಬಹುದಾಗಿದೆ.


Click it and Unblock the Notifications








