ವಿಶ್ವದ ದುಬಾರಿ ಕಾರಿನ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ...
ಇತ್ತೀಚೆಗೆ ದುಬಾರಿ ಬೆಲೆಯ ಹೈಪರ್ ಕಾರುಗಳನ್ನು ನಿರ್ಮಾಣ ಮಾಡುವುದು ಮತ್ತು ಖರೀದಿ ಮಾಡುವುದು ಅಂದ್ರೆ ಕೆಲವರಿಗೆ ಕ್ರೇಜ್ ಆಗಿದೆ ಹೋಗಿದೆ. ಯಾಕಂದ್ರೆ ಪ್ರದರ್ಶನಕ್ಕಿಡಲಾಗಿರುವ ಇಲ್ಲೊಂದು ಹೈಪರ್ ಕಾರು ಕೂಡಾ ಹತ್ತಲ್ಲ, ಹದಿನೈದು ಬರೋಬ್ಬರಿ 122 ಕೋಟಿ ಬೆಲೆ ಹೊಂದಿದ್ದು, ಈ ಕಾರಿನಲ್ಲಿರುವ ವಿಶೇಷತೆಗಳು ಸೂಪರ್ ಕಾರು ಪ್ರಿಯರನ್ನೇ ಬೆಚ್ಚಬೀಳಿಸುವಂತಿವೆ.

ಹೌದು, ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಇಟಾಲಿಯನ್ ಕ್ರಿಡಾ ಕಾರು ತಯಾರಿಕಾ ಸಂಸ್ಥೆಯಾದ ಪಗಾನಿ ತನ್ನ ವಿನೂತನ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಪ್ರಿಮಿಯಂ ಹೈಪರ್ ಕಾರು ಮಾದರಿಯನ್ನು ಪ್ರದರ್ಶನ ಮಾಡಿದ್ದು, ಬರೋಬ್ಬರಿ 122 ಕೋಟಿ ಬೆಲೆ ಪಡೆದುಕೊಳ್ಳುವ ಮೂಲಕ ಜಗತ್ತಿನ ಅತಿ ದುಬಾರಿ ಕಾರ್ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಇಂಗ್ಲೆಂಡ್‌ನಲ್ಲಿ ಆರಂಭಗೊಂಡಿರುವ 2018ರ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್ ಪ್ರದರ್ಶನದಲ್ಲಿ ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಪ್ರದರ್ಶನ ಮಾಡಲಾಗಿದ್ದು, ಈ ಹೈಪರ್ ಕಾರು ಮಾದರಿಯು ಲಿಮಿಟೆಡ್ ಎಡಿಷನ್ ಹಿನ್ನೆಲೆಯಲ್ಲಿ ಕೇವಲ 3 ಕಾರುಗಳನ್ನು ಮಾತ್ರವೇ ಪಗಾನಿ ಸಂಸ್ಥೆಯು ಅಭಿವೃದ್ಧಿ ಮಾಡಿದೆಯೆಂತೆ.

ಹೀಗಾಗಿ ಖರೀದಿಗೆ ಲಭ್ಯವಿದ್ದ ಒಟ್ಟು ಮೂರು ಕಾರುಗಳು ಸಹ ಈಗಾಗಲೇ ಮಾರಾಟಗೊಂಡಿದ್ದು, ಪಾಗಾನಿ ಸಂಸ್ಥೆಯ ಮತ್ತೊಂದು ಜನಪ್ರಿಯ ಸೂಪರ್ ಕಾರು ಮಾದರಿಯಾದ ಪಾಗಾನಿ ಜೊಂಡಾ(1998) ಕಾರಿನ ವಿನ್ಯಾಸಗಳನ್ನೇ ಹೊತ್ತು ಬಂದಿರುವ ಹೊಸ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರುಗಳು ಬಲಿಷ್ಠ ಎಂಜಿನ್ ಮಾದರಿಯನ್ನ ಪಡೆದುಕೊಂಡಿವೆ.

ಓಪನ್ ಟಾಪ್ ವಿನ್ಯಾಸ ಹೊಂದಿರುವ ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರುಗಳ ಮೇಲ್ಭಾಗದಲ್ಲಿ ಹೊದಿಕೆಯಂತಹ(ಕನ್ವರ್ಟಬಲ್) ಯಾವುದೇ ಆಯ್ಕೆ ಕೊಟ್ಟಿಲ್ಲವಾದರೂ, ಸ್ಪೀಡ್ ಡ್ರೈವಿಂಗ್‌ನೊಂದಿಗೆ ಗಾಳಿಯ ವೇಗವನ್ನು ಆಸ್ವಾದಿಸುತ್ತಾ ಡ್ರವಿಂಗ್ ಮಾಡುವುದೇ ಈ ಕಾರಿನ ವಿಶೇಷತೆ.

ಎಂಜಿನ್ ಸಾಮರ್ಥ್ಯ
ಪಾಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರುಗಳಲ್ಲಿ 7.3-ಲೀಟರ್(7,300 ಸಿಸಿ) ಮರ್ಸಿಡಿಸ್-ಎಎಂಜಿ ಎ120 ವಿ12 ಎಂಜಿನ್ ಬಳಕೆ ಮಾಡಲಾಗಿದ್ದು, ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್‌ಮಿಷನ್‌ನೊಂದಿಗೆ 789-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲವು.

ಈ ಮೂಲಕ 3.1 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮಿ ವೇಗಪಡೆದುಕೊಳ್ಳಬಲ್ಲ ಸ್ಪೀಡ್ ಹೊಂದಿದ್ದು, ಗರಿಷ್ಟವಾಗಿ ಪ್ರತಿ ಗಂಟೆಗೆ 355ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸುವ ಗುಣಹೊಂದಿವೆ. ಇದರೊಂದಿಗೆ ಜಗತ್ತಿನ ಅತಿ ದುಬಾರಿ ಕಾರು ಎಂದೇ ಖ್ಯಾತಿ ಹೊಂದಿರುವ ಪಾಗಾನಿ ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಸುರಕ್ಷತೆಗಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿರುವ ಪಗಾನಿ ಹೊಸ ಹೈಪರ್ ಕಾರು ಮಾದರಿಗಳಲ್ಲಿ ಪ್ರತಿ ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಣ ಮಾಡಬಹುದಾದ ವಿಶ್‌ಬೋನ್ಸ್, ರಾಕರ್ ಆರ್ಮ್, ಅಡ್ಜೆಸ್ಟೆಬಲ್ ಒಹೊಲೈನ್ ಶಾರ್ಕ್ಸ್, ಆಂಟಿ ರೂಲರ್ ಬಾರ್, 380 ಎಂಎಂ ಬ್ರೇಕ್ಸ್ ಜೊತೆ ವೆಂಟಿಲೆಟೆಡ್ ಡಿಸ್ಕ್, ಮುಂಭಾಗದಲ್ಲಿ ಸಿಕ್ಸ್ ಪಿಸ್ಟನ್ ಕಾಲಿಪರ್ಸ್ ಮತ್ತು ಹಿಂಭಾಗದಲ್ಲಿ ಫೌರ್ ಪಿಸ್ಟನ್ ಕಾಲಿಪರ್ಸ್ ಬಳಕೆ ಮಾಡಲಾಗಿದೆ.

ಒಟ್ಟಿನಲ್ಲಿ ಜಗತ್ತಿನ ಅತಿ ದುಬಾರಿ ಕಾರು ಮಾದರಿಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರುಗಳು ಬಲಿಷ್ಠ ಎಂಜಿನ್ ಜೊತೆ ಜೊತೆಗೆ ಐಷಾರಾಮಿ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರನ್ನ ವಿನ್ಯಾಸಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯ ಮಾಜಿ ಡಿಸೈನರ್ ಹೊರಾಶಿಯೋ ಕೂಡಾ ಖರೀದಿಗಿದ್ದ ಮೂರು ಕಾರುಗಳಲ್ಲಿ ಒಂದನ್ನ ಖರೀದಿ ಮಾಡಿರುವುದೇ ಇಲ್ಲಿ ಪ್ರಮುಖ ಸುದ್ದಿ.
ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್ ಪ್ರದರ್ಶನದಲ್ಲಿ ಕಂಡು ಬಂದ ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರುಗಳ ವಿಡಿಯೋ ಇಲ್ಲಿದೆ ನೋಡಿ..


Click it and Unblock the Notifications








