ಹೋಂಡಾ ಸಿವಿಕ್ ಡೀಸೆಲ್ ವರ್ಷನ್‌ಗಳಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!?
ಮುಂಬರುವ ಹೊಸ ಕಾರುಗಳ ಪೈಕಿ ಅತಿ ಹೆಚ್ಚು ನೀರಿಕ್ಷೆ ಹುಟ್ಟುಹಾಕಿರುವುದು ಹೋಂಡಾ ನ್ಯೂ ಜನರೇಷನ್ ಸಿವಿಕ್ ಕಾರುಗಳು ಅಂದ್ರೆ ತಪ್ಪಾಗುದಿಲ್ಲ. ಈ ಹಿಂದೆಯೇ ಬಹುದಿನಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿ ಕಾರಣಾಂತರಗಳಿಂದ ಹಿಂದೆ ಸರಿದ್ದ ಸಿವಿಕ್ ಸೆಡಾನ್ ಕಾರುಗಳು ಇದೀಗ ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಮರಳಿ ಬರುತ್ತಿದ್ದು, ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿ ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದ ಹೋಂಡಾ ಸಿವಿಕ್ ಸೆಡಾನ್ ಕಾರುಗಳು ಮತ್ತೆ ಖರೀದಿಗೆ ಲಭ್ಯವಾಗುತ್ತಿದ್ದು, ಇದಕ್ಕೂ ಮುನ್ನ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಶೈಲಿಯ ಸಿವಿಕ್ ಕಾರುಗಳನ್ನು ಅನಾವರಣಗೊಳಿಸಲಾಗಿತ್ತು. ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿವಿಸುತ್ತಿರುವ ಸಿವಿಕ್ ಕಾರುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೇ ಸಮಯದಲ್ಲಿ ಡೀಸೆಲ್ ವರ್ಷನ್ ಸಿವಿಕ್ ಕಾರುಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆಡಾನ್ ಆವೃತ್ತಿಗಳಿಗೆ ವಿಶೇಷ ಬೇಡಿಕೆ ಹಿನ್ನೆಲೆ ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಸಿವಿಕ್ ಮಾದರಿಗಳನ್ನು ಹೊಸತನದೊಂದಿಗೆ ಮರು ಅಭಿವೃದ್ಧಿಗೊಳಿಸಿದ್ದು, ನವೆಂಬರ್ ಇಲ್ಲವೇ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸಿವಿಕ್ ಆವೃತ್ತಿಗಳನ್ನು ಹೊರತರುತ್ತಿದೆ.

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಸಿವಿಕ್ ಕಾರುಗಳು 4 ಸಿಲಿಂಡರ್ ಸೌಲಭ್ಯದೊಂದಿಗೆ ಮೂರು ವಿವಿಧ ಪೆಟ್ರೋಲ್ ಆವೃತ್ತಿಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ ಒಂದು ಆವೃತ್ತಿಯು ಲಭ್ಯವಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಸಿವಿಕ್ ಕಾರುಗಳು ಕೊಂಚ ಬದಲಾವಣೆ ಹೊಂದಲಿವೆ.

ಮಾಹಿತಿಗಳ ಪ್ರಕಾರ, ಭಾರತೀಯ ಸಿವಿಕ್ ಮಾದರಿಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 158 ಬಿಎಚ್‌ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್‌ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವಿಭಾಗದಲ್ಲಿ 6-ಸ್ಪೀಡ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳು ಆಯ್ಕೆ ಮಾಡಬಹುದಾಗಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಇರಲಿದೆ.

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಹೀಗಾಗಿ ಹೊಸ ಕಾರಿನ ಬೆಲೆಯು ದೆಹೆಲಿ ಎಕ್ಸ್ ಶೋರಂ ಪ್ರಕಾರ 22 ಲಕ್ಷದಿಂದ 28 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಹೊಸ ಕಾರುಗಳು ಎಷ್ಟರ ಮಟ್ಟಿಗೆ ಬೇಡಿಕೆ ಪಡೆಯಲಿವೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.


Click it and Unblock the Notifications








