ದೆಹಲಿಯಲ್ಲಿ ಶುರುವಾಯ್ತು ಬಿಎಸ್6 ಇಂಧನ ಮಾರಾಟ
2020ರ ಏಪ್ರಿಲ್‍ನಿಂದ, ಭಾರತದಲ್ಲಿ ಬಿಎಸ್6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಇದಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು ನೂತನ ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತಹ ಎಂಜಿನ್ ಹೊಂದುವುದು ಕಡ್ಡಾಯವಾಗಲಿದೆ. ಬಿಎಸ್6 ಎಂಜಿನ್‍ಗಳಿಗೆ ತಕ್ಕಂತಹ ಬಿಎಸ್6 ಇಂಧನವನ್ನು ಸಹ ಬಳಸಬೇಕಾಗುತ್ತದೆ. ದೆಹಲಿ ರಾಜ್ಯವು ಬಿಎಸ್6 ಇಂಧನ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

2020ರ ಏಪ್ರಿಲ್ ನಂತರ ಭಾರತದಲ್ಲಿ ಬಿಎಸ್6 ಎಂಜಿನ್‍ಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುವುದೆಂದು ಪ್ರಕಾಶ್ ಜಾವ್ಡೇಕರ್ ಖಚಿತಪಡಿಸಿದ್ದಾರೆ. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬೆರಳೆಣಿಕೆಯಷ್ಟು ವಾಹನಗಳಲ್ಲಿ ಮಾತ್ರ ಬಿಎಸ್6 ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಆರಂಭದಲ್ಲಿ ಹೊಸ ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್ ಹೊಂದಿರುವ ಬಲೆನೊ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ಉಳಿದ ಕಂಪನಿಗಳು ಸಹ ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್ ಹೊಂದಿರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಎಸ್6 ಎಂಜಿನ್ ಹೊಂದಿರುವ ವಾಹನಗಳು ಮಾರುಕಟ್ಟೆಗೆ ಬರಲಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ರಾಷ್ಟ್ರ ರಾಜಧಾನಿ - ದೆಹಲಿಯನ್ನು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ. ಹೊಸ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಿದ ನಂತರ ಭವಿಷ್ಯದಲ್ಲಿ ಮಾಲಿನ್ಯ ಪ್ರಮಾಣವು ಕಡಿಮೆಯಾಗುವ ನಿರೀಕ್ಷೆಯಿದೆ.

ರಾಷ್ಟ್ರ ರಾಜಧಾನಿಯಲ್ಲಿನ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಸರ್ಕಾರ ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ವಿವಿಧ ಎಕ್ಸ್‌ಪ್ರೆಸ್‌ವೇಗಳು ಹಾಗೂ ಬೈಪಾಸ್‌ಗಳನ್ನು ಸಹ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಟ್ರಕ್‌ಗಳಂತಹ ಭಾರೀ ವಾಹನಗಳು ನಗರ ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ. ಸದ್ಯಕ್ಕೆ 60,000ಕ್ಕೂ ಹೆಚ್ಚು ಟ್ರಕ್‍ಗಳು ದೆಹಲಿಯನ್ನು ಪ್ರವೇಶಿಸುತ್ತಿಲ್ಲ.

ಇದರಿಂದಾಗಿ ಮಾಲಿನ್ಯ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹೊಸ ಬಿಎಸ್ 6 ಮಾಲಿನ್ಯ ನಿಯಮಗಳಿಂದಾಗಿ, ವಾಹನ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ತೀವ್ರ ಬದಲಾವಣೆಗಳಾಗಲಿವೆ. ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಕಂಪನಿಯು, ಹೊಸ ಮಾಲಿನ್ಯ ನಿಯಮಗಳು ಜಾರಿಯಾದ ನಂತರ, ಡೀಸೆಲ್ ಆವೃತ್ತಿಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಉಳಿದ ಕಂಪನಿಗಳೂ ಸಹ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಎಂಟ್ರಿ ಲೆವೆಲ್‍ನಲ್ಲಿ ನೀಡಲಾಗುವುದಿಲ್ಲವೆಂದು ತಿಳಿಸಿವೆ. ಬೈಕ್ ಕಂಪನಿಗಳೂ ಸಹ ಹೊಸ ಬಿಎಸ್6 ಆಧಾರಿತ ಎಂಜಿನ್‌ಗಳ ಅಭಿವೃದ್ದಿಯಲ್ಲಿ ತೊಡಗಿವೆ. ಮಾರುಕಟ್ಟೆಯಲ್ಲಿ ಹೊಸ ಬಿಎಸ್6 ಎಂಜಿನ್ ವಾಹನಗಳನ್ನು ಬಿಡುಗಡೆಗೊಳಿಸಿದ ನಂತರ, ವಾಹನಗಳ ಬೆಲೆಗಳಲ್ಲಿ ಸ್ವಲ್ಪ ಮಟ್ಟದ ಏರಿಕೆಯಾಗುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವವರಿಗೆ ಸಬ್ಸಿಡಿ ಹಾಗೂ ತೆರಿಗೆ ಪ್ರಯೋಜನಗಳನ್ನು ನೀಡಲಾಗುವುದು.

ಈ ರೀತಿಯ ಸೌಲಭ್ಯಗಳನ್ನು ನೀಡಿ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸಲು ಸರ್ಕಾರ ಮುಂದಾಗಿದೆ. ಮೂಲಸೌಕರ್ಯಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ತೇಜಿಸಲು, 125 ಸಿಸಿ ಒಳಗಿರುವ ದ್ವಿಚಕ್ರ ವಾಹನಗಳ ಮಾರಾಟವನ್ನು ನಿಷೇಧಿಸಲು ಭಾರತ ಸರ್ಕಾರ ಯೋಜಿಸುತ್ತಿದೆ.

ಹೊಸ ಮಾಲಿನ್ಯ ನಿಯಮಗಳನ್ನು ಪೂರೈಸಲು ಅನೇಕ ಕಂಪನಿಗಳು ಹೈಬ್ರಿಡ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಹೈಬ್ರಿಡ್ ವಾಹನಗಳ ಬೆಲೆಯು ರೂ.10ಲಕ್ಷದೊಳಗಿದ್ದು, ಇವುಗಳು ಇಂಧನ ದಕ್ಷತೆಯನ್ನು ಹೆಚ್ಚಿಸಿ ಮಾಲಿನ್ಯವನ್ನು ಕಡಿಮೆ ಮಾಡುತ್ತವೆ.


Click it and Unblock the Notifications