ಮಾರಾಟಕ್ಕಿದೆ ದಲೈ ಲಾಮಾ ಬಳಸುತ್ತಿದ್ದ ಲ್ಯಾಂಡ್ ರೋವರ್ ಕಾರ್..!
14ನೇ ದಲೈ ಲಾಮಾರವರು ಪ್ರಪಂಚದ ಅತಿ ಹೆಚ್ಚು ಪ್ರೀತಿ ಪಾತ್ರರಾದ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ಬೋಧನೆ ಹಾಗೂ ಇಳಿ ವಯಸ್ಸಿನಲ್ಲಿರುವ ಉತ್ಸಾಹದಿಂದ ಜನಪ್ರಿಯರಾಗಿದ್ದಾರೆ. ಎರಡನೇ ಮಹಾಯುದ್ದದ ನಂತರ ಆಯ್ಕೆಯಾದ ದಲೈ ಲಾಮಾರವರು, ಅಂದಿನಿಂದ ಪ್ರಪಂಚದ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ದಲೈ ಲಾಮಾರವರು 10 ವರ್ಷಗಳಿಗೂ ಹೆಚ್ಚು ಕಾಲ ಬಳಸಿದ್ದ ಲ್ಯಾಂಡ್ ರೋವರ್ ಸೀರಿಸ್ 2ಎ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದ್ದು, ಈ ಕಾರಿಗೆ ಸುಮಾರು ರೂ.1 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ದಲೈ ಲಾಮಾರವರು 1966 ರಿಂದ 1976ರವರೆಗೆ ಭಾರತದ ಧರ್ಮಾಶಾಲಾದಲ್ಲಿದ್ದಾಗ ತಮ್ಮ ವೈಯಕ್ತಿಕ ಕಾರ್ಯಗಳಿಗಾಗಿ ಈ ಲ್ಯಾಂಡ್ ರೋವರ್ ಸೀರಿಸ್ 2ಎ ಕಾರ್ ಅನ್ನು ಬಳಸುತ್ತಿದ್ದರು. ಚೀನಾ ದೇಶವು ಟಿಬೆಟ್ ಮೇಲೆ ದಾಳಿ ಮಾಡಿದ ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದ ದಲೈ ಲಾಮಾರವರು ಈ ಪರ್ವತಗಳ ನಗರವಾದ ಧರ್ಮಾಶಾಲಾವನ್ನು ತಮ್ಮ ಮನೆಯನ್ನಾಗಿಸಿ ಕೊಂಡಿದ್ದರು. ದಲೈ ಲಾಮಾರವರು ಕಾರ್ ಅನ್ನು ಸ್ವತಃ ತಾವೇ ಡ್ರೈವ್ ಮಾಡದಿದ್ದರೂ, ಮುಂಭಾಗದ ಸೀಟಿನಲ್ಲಿ ಕುಳಿತು ಈ ಕಾರಿನಲ್ಲಿ ಚಲಿಸುತ್ತಿದ್ದರು.

ದಲೈ ಲಾಮಾರವರು ಆಗಾಗ ಈ ಕಾರ್ ಅನ್ನು ಬಳಸಿ ಈ ಕಾರಿನಲ್ಲಿ ಓಡಾಡುತ್ತಿದ್ದರು. ಈ ಕಾರನ್ನು 2006ರಲ್ಲಿ ರಿಸ್ಟೋರ್ ಮಾಡಲಾಯಿತು. ರಿಸ್ಟೋರ್ ಮಾಡುವ ಸಮಯದಲ್ಲಿ ಈ ಕಾರು ಸುಮಾರು 1.10 ಲಕ್ಷ ಕಿ.ಮೀನಷ್ಟು ಪ್ರಯಾಣಿಸಿತ್ತು. ಈ ವಾಹನವು ಭಾರತದಲ್ಲಿ ಮಾತ್ರ ಸಂಚರಿಸಿರದೇ, ಗಡಿಯನ್ನು ದಾಟಿ ಹಲವಾರು ಬಾರಿ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನೇಪಾಳದಲ್ಲಿಯೂ ಸಂಚರಿಸಿದೆ. ಸಾಮಾನ್ಯವಾಗಿ ಲ್ಯಾಂಡ್ ರೋವರ್ ಸೀರಿಸ್‍ನ 2ಎ ವಾಹನಗಳು ಕಡಿಮೆ ಅನುಪಾತ ಹೊಂದಿದ್ದರೂ 4X4 ಸಾಮರ್ಥ್ಯಕ್ಕೆ ಸೂಕ್ತವಾಗಿವೆ.

ಹಿಮಾಲಯದ ರಸ್ತೆಗಳು ದೀರ್ಘಕಾಲದವರೆಗೆ ಸುಸಜ್ಜಿತವಾಗಿಲ್ಲದ ಕಾರಣ ಹಾಗೂ ಸುಲಭವಾದ ರಸ್ತೆಯಾಗಿಲ್ಲದ ಕಾರಣ, 4X4 ಸಾಮರ್ಥ್ಯದ ವಾಹನಗಳು ಮಾತ್ರ ಈ ಸ್ಥಳಗಳಲ್ಲಿ ಚಲಿಸಲು ಸಾಧ್ಯ. ಲ್ಯಾಂಡ್ ರೋವರ್ ಸೀರಿಸ್ 2ಎ ಅಸಾಧಾರಣ ಸಾಮರ್ಥ್ಯದ ವಾಹನವಾಗಿದೆ. ಸೀರಿಸ್ 2ಎ ಪ್ರಾರಂಭವಾದ 31 ವರ್ಷಗಳ ನಂತರ, 1992ರಲ್ಲಿ, ಲ್ಯಾಂಡ್ ರೋವರ್ ಕಂಪನಿಯು ಮಾರಾಟ ಮಾಡಿದ 70%ಕ್ಕೂ ಹೆಚ್ಚು ವಾಹನಗಳು ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ರಸ್ತೆಗಳಲ್ಲಿ ಸಂಚರಿಸುತ್ತಿವೆ ಎಂದು ಹೇಳಿಕೊಂಡಿತ್ತು. ಇದು ಕಾರಿನ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ.

ದಲೈ ಲಾಮಾರವರು 1966ರಲ್ಲಿ ಲ್ಯಾಂಡ್ ರೋವರ್ ಸೀರಿಸ್ 2ಎ ಕಾರ್ ಅನ್ನು ಖರೀದಿಸಿದ್ದರು. ಲಾಮಾರವರು ಯುಕೆಯಲ್ಲಿರುವ ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದರು. ಅವರು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿರುವ ಫೋಟೋಗಳು ಇವೆ. ದಲೈ ಲಾಮಾರವರ ವಾಹನವು 2.25 ಲೀಟರ್‍ನ, ನಾಲ್ಕು ಸಿಲಿಂಡರ್, ಇನ್‍ಲೈನ್ ಎಂಜಿನ್ ಹೊಂದಿದೆ. ಈ ಎಂಜಿನ್ ನಿರಂತರವಾಗಿ ಅನೇಕ ಮೈಲುಗಳಷ್ಟು ದೂರ ಕ್ರಮಿಸುವುದಕ್ಕೆ ಹೆಸರುವಾಸಿಯಾಗಿದೆ.

1961ರಲ್ಲಿ ಸೀರಿಸ್ 2 ಉತ್ಪಾದನೆಯನ್ನು ನಿಲ್ಲಿಸಿದ ನಂತರ, ಸೀರಿಸ್ 2ಎ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಯಿತು. ಇವುಗಳ ಉತ್ಪಾದನೆಯು 1971ರವರೆಗೆ ಮುಂದುವರೆಯಿತು. ಇವುಗಳ ಸ್ಥಾನದಲ್ಲಿ ಸೀರಿಸ್ 3 ವಾಹನಗಳನ್ನು ಉತ್ಪಾದಿಸಲಾಯಿತು. ದಲೈ ಲಾಮಾರವರ ಬಳಿಯಿದ್ದ ಈ ವಾಹನವನ್ನು ಹತ್ತು ವರ್ಷಗಳ ನಂತರ ಮಾರಾಟ ಮಾಡಲಾಯಿತು. ಅದಾದ ನಂತರ ಈ ವಾಹನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕಾರನ್ನು 2006ರಲ್ಲಿ ಬ್ರಿಟನ್ನಿನ ವೆಸ್ಟ್ ಕೋಸ್ಟ್ ನಲ್ಲಿ ರಿಸ್ಟೋರ್ ಮಾಡಲಾಯಿತು.

ಈ ವಾಹನವು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರಣ ನಿಧಾನವಾಗಿ ರಿಸ್ಟೋರ್ ಮಾಡಲಾಯಿತು. ಈ ರಿಸ್ಟೋರ್ ಕಾರ್ಯಕ್ಕೆ ಒಂದು ವರ್ಷ ತೆಗೆದುಕೊಳ್ಳಲಾಗಿದೆ. ಈ ವಾಹನವನ್ನು ರಿಸ್ಟೋರ್ ಮಾಡಿದವರ ಪ್ರಕಾರ, ಈ ವಾಹನದ ಚಾಸಿಸ್‍ಗೆ ತುಕ್ಕು ಹಿಡಿದಿರಲಿಲ್ಲ. ಈ ಕಾರು ಮೂಲ ಎಂಜಿನ್ ಹೊಂದಿದೆ. ರಿಸ್ಟೋರ್ ಮಾಡುವ ಸಮಯದಲ್ಲಿ ಟ್ರಾನ್ಸ್ ಫರ್ ಕೇಸ್ ಹಾಗೂ ಡಿಫೆರೆನ್ಶಿಯಲ್‍ಗಳನ್ನು ಪುನರ್ ನಿರ್ಮಿಸಲಾಗಿದೆ. ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್‍ಗಳನ್ನು ಸಹ ಒರಿಜಿನಲ್ ಬಣ್ಣ ಹಾಗೂ ಫ್ಯಾಬ್ರಿಕ್‍ಗಳನ್ನು ಬಳಸಿ ರಿಸ್ಟೋರ್ ಮಾಡಲಾಗಿದೆ.

ಈ ಕಾರ್ ಅನ್ನು ಆಗಸ್ಟ್ 29ರಿಂದ ಮಾರಾಟಕ್ಕಿಡಲಾಗುವುದು. ಈ ಕಾರಿನ ಬೆಲೆಯನ್ನು 1,00,000 ಡಾಲರ್‍ನಿಂದ 1,50,000 ಡಾಲರ್‍ವರೆಗೆ ನಿಗದಿಪಡಿಸಲಾಗಿದೆ. ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು ರೂ.70 ಲಕ್ಷಗಳಿಂದ ರೂ.1.2 ಕೋಟಿಗಳಾಗಿರಲಿದೆ. ನೀವೂ ಸಹ ಈ ಕಾರ್ ಅನ್ನು ಕೊಳ್ಳಬಹುದು. ಈ ಕಾರ್ ಅನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
Image Courtesy: RMSothebys


Click it and Unblock the Notifications