ಕಿಯಾ ಮೋಟಾರ್ಸ್ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸಿಕ್ತು ಅಧಿಕೃತ ಚಾಲನೆ
ಕಿಯಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ಸೆಲ್ಟೊಸ್ ಕಾರು ಮಾದರಿಯನ್ನು ಹೊಸ ಕಾರು ಉತ್ಪಾದನಾ ಘಟಕದಲ್ಲೇ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುತ್ತಿದ್ದು, ಇದೀಗ ಹೊಸ ಘಟಕಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪೆನುಗೊಂಡ ಬಳಿಯಿರುವ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕವು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಬರೋಬ್ಬರಿ 211 ಎಕರೆ ಪ್ರದೇಶದಲ್ಲಿ ಬೃಹತ್ ಕಾರು ಉತ್ಪಾದನಾ ಘಟಕವು ತಲೆಎತ್ತಿದೆ. ವಾರ್ಷಿಕವಾಗಿ 3 ಲಕ್ಷ ಕಾರುಗಳ ನಿರ್ಮಾಣ ಮಾಡುವಷ್ಟು ಸಾಮರ್ಥ್ಯ ಹೊಂದಿರುವ ಈ ಹೊಸ ಘಟಕದಲ್ಲಿ ಪ್ರತಿ 1.20 ನಿಮಿಷಕ್ಕೆ ಒಂದು ಹೊಸ ಕಾರು ಅಭಿವೃದ್ದಿಪಡಿಸಲಾಗುತ್ತದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ವಿವಿಧ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಆರಂಭಿದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಕಿಯಾ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವುದಲ್ಲದೇ ಅಧಿಕೃತವಾಗಿ ದೇಶದ ಐದನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಅನುಕ್ರಮವಾಗಿ ಒಂದು, ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಇದೀಗ ಹೊಸದಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಐದನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿ ಸ್ಥಾನ ಪಡೆದಿದೆ. ಕಿಯಾ ಮೋಟಾರ್ಸ್ ಅಬ್ಬರದ ಮುಂದೆ ಟೊಯೊಟಾ ಮತ್ತು ಹೋಂಡಾ ಸಂಸ್ಥೆಗಳು ಸಹ ನೆಲಕಚ್ಚಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನದತ್ತ ಮುನ್ನುಗ್ಗುವ ತವಕದಲ್ಲಿದೆ.

ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಯು ಕಾರು ಮಾರಾಟದಲ್ಲಿ ಬಹುದೊಡ್ಡ ಜಾಲ ಹೊಂದಿದ್ದು, ತದನಂತರದ ಸ್ಥಾನದಲ್ಲಿರುವ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳಿಗೆ ಸರಿಸಮನಾಗಿ ಬೆಳೆಯುತ್ತಿರುವ ಕಿಯಾ ಸಂಸ್ಥೆಯು ಮತ್ತಷ್ಟು ಆಕರ್ಷಕ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಈ ಮೂಲಕ ಎಲ್ಲಾ ಮಾದರಿಯ ಕಾರು ಮಾದರಿಗಳು ಪೈಪೋಟಿ ನೀಡಲು ಸಿದ್ದವಾಗಿರುವ ಕಿಯಾ ಸಂಸ್ಥೆಯು ಸದ್ಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟೊಯೊಟಾಗೆ ಪೈಪೋಟಿಯಾಗಿ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಭಾರೀ ಸಂಚಲನಕ್ಕೆ ಕಾರಣವಾಗಲಿದೆ.

ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹಾಗೆಯೇ ಟೊಯೊಟಾ ಸಂಸ್ಥೆಯ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರುಕಟ್ಟೆ ಪ್ರವೇಶ ಪಡೆಯಲಿರುವ ಕಾರ್ನಿವಾಲ್ ಕಾರು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅತ್ಯುತ್ತಮ ಫೀಚರ್ಸ್‌ನೊಂದಿಗೆ ಹೊಸ ಅಧ್ಯಾಯ ಶುರುಮಾಡಲಿದೆ.

ಮಾಹಿತಿಗಳ ಪ್ರಕಾರ ಹೊಸ ಕಾರ್ನಿವಾಲ್ ಕಾರು 7 ಸೀಟರ್ ಮತ್ತು 9 ಸೀಟರ್ ಆವೃತ್ತಿಯಲ್ಲಿ ಖರೀದಿ ಲಭ್ಯವಾಗಲಿದ್ದು, ಕಾರಿನ ಬೆಲೆಯು ಆರಂಭಿಕವಾಗಿ ರೂ.16 ಲಕ್ಷದಿಂದ ರೂ.25 ಲಕ್ಷ ಎಕ್ಸ್‌ಶೋರೂಂ ಬೆಲೆ ಪಡೆದುಕೊಳ್ಳಲಿದೆ. ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತ 300-ಎಂಎಂ ನಷ್ಟು ಹೆಚ್ಚು ಉದ್ದವಾಗಿದ್ದು, ಮೂರನೇ ಸಾಲಿನಲ್ಲೂ ಅರಾಮದಾಯಕವಾಗಿ ಕೂರಬಹುದಾದ ಆಸನ ಸೌಲಭ್ಯವನ್ನು ಹೊಂದಿದೆ.


Click it and Unblock the Notifications








