ವಿನೂನತ ಸೌಲಭ್ಯಗಳೊಂದಿಗೆ ಮಹೀಂದ್ರಾ ಥಾರ್ ಸ್ಪೆಷಲ್ ಎಡಿಷನ್ ಬಿಡುಗಡೆ
ಭಾರತದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಹೀಂದ್ರಾ ತನ್ನ ಆಫ್ ರೋಡ್ ಖ್ಯಾತಿಯ ಥಾರ್ ಅಭಿಮಾನಿಗಳಿಗಾಗಿ ವಿನೂತನ ಸೌಲಭ್ಯವುಳ್ಳ ಲಿಮಿಟೆಡ್ ಎಡಿಷನ್ 'ಥಾರ್ 700' ಬಿಡುಗಡೆ ಮಾಡಿದ್ದು, ಈ ಹೊಸ ಕಾರು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಮಹೀಂದ್ರಾ ಸಂಸ್ಥೆಯು ಸದ್ಯ ತನ್ನ ಕಾರು ಮಾರಾಟ ವಿಭಾಗದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಥಾರ್ ಸೇರಿದಂತೆ ಹಲವು ಕಾರು ಮಾದರಿಗಳನ್ನು ನೆಕ್ಸ್ಟ್ ಜನರೇಷನ್ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮುನ್ನ ಥಾರ್ 700 ಎನ್ನುವ ಲಿಮಿಟೆಡ್ ಆವೃತ್ತಿಯನ್ನು ರಸ್ತೆಗಿಳಿಸಿದೆ.

ಸಿಮಿತ ಅವಧಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿರುವ ಥಾರ್ ಲಿಮಿಟೆಡ್ ಎಡಿಷನ್ ಕಾರು ಕೇವಲ 700 ಯುನಿಟ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.99 ಲಕ್ಷ ಬೆಲೆ ಪಡೆದುಕೊಂಡಿದೆ.

ಮಹೀಂದ್ರಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ 70 ವರ್ಷ ಪೂರೈಸುತ್ತಿದ್ದು, ಇದರ ಸವಿನೆನಪಿಗಾಗಿ ಆಫ್ ರೋಡ್ ಕಿಂಗ್ ಥಾರ್ ಕಾರಿನ 700 ಯನಿಟ್‌ಗಳನ್ನು ಲಿಮಿಟೆಡ್ ಎಡಿಷನ್ ಮಾದರಿಗಾಗಿ ಪರಿಚಯಿಸಿದೆ.

1949ರಲ್ಲಿ ತನ್ನ ಮೊದಲ ವಾಹನ ಮಾದರಿಯನ್ನು ರಸ್ತೆಗಿಳಿಸಿ ಯಶಸ್ವಿಯಾದ ಮಹೀಂದ್ರಾ ಅಂದಿನಿಂದ ಇದುವರೆಗೂ ದೇಶಿಯ ಮಾರುಕಟ್ಟೆಯ ವಾಹನ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಹಲವು ಕಾರು ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದುವ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಕಾರು ಮಾರಾಟದಲ್ಲಿ ನಂ.1 ಸ್ಥಾನದತ್ತ ಮುನ್ನುಗ್ಗುವ ಗುರಿಹೊಂದಿದೆ.

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಕಾರು ಮಾರಾಟದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ವಾಹನಗಳ ಎಂಜಿನ್, ಪರ್ಫಾಮೆನ್ಸ್, ಗ್ರಾಹಕರ ಸೇವೆಗಳು, ಮಾರುಕಟ್ಟೆ ನಿರ್ವಹಣೆಯಲ್ಲಿ ಗುರುತರ ಬದಲಾವಣೆಗೆ ಕಾರಣವಾಗಿದೆ.

ಇದರಿಂದಾಗಿಯೇ ಕಳೆದ 2 ವರ್ಷಗಳಲ್ಲಿ ಮಹೀಂದ್ರಾ ಸಂಸ್ಥೆಯ ಪ್ರಯಾಣಿಕ ಬಳಕೆಯ ವಾಹನ ಮಾರಾಟವು ದುಪ್ಪಟ್ಟಾಗಿದ್ದು, ಅದರಲ್ಲೂ ಮಹೀಂದ್ರಾ ಸಂಸ್ಥೆಗೆ ಬಹುದಿನಗಳಿಂದಲೂ ಉತ್ತಮ ಹೆಸರು ತಂದುಕೊಟ್ಟಿರುವ 4x4 ಥಾರ್ ಕಾರನ್ನು 70ನೇ ಸಂಭ್ರಮಕ್ಕಾಗಿ ಲಿಮಿಟೆಡ್ ಎಡಿಷನ್ ಮಾದರಿಯಾಗಿ ಆಯ್ಕೆ ಮಾಡಲಾಗಿದೆ.

ಲಿಮಿಟೆಡ್ ಎಡಿಷನ್ ಮಾದರಿಯು ಈ ಹಿಂದಿನಂತೆಯೇ 2.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲೇ ಬಿಡುಗಡೆ ಮಾಡಲಾಗಿದ್ದು, ಕಾರಿನ ಹೊರಭಾಗದ ವಿನ್ಯಾಸಗಳಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ.

ಹೊಸ ಕಾರಿನ ಹೊರಭಾಗದಲ್ಲಿ ಜೋಡಿಸಲಾಗಿರುವ ಲಿಮಿಟೆಡ್ ಎಡಿಷನ್ ಬ್ಯಾಡ್ಜ್‌ನಲ್ಲಿ 700 ಸಂಖ್ಯೆಯ ಜೊತೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಸಹಿ ಕೂಡಾ ಇರಲಿದ್ದು, ಹೊಸ ಕಾರು ಹೆಚ್ಚುವರಿಯಾಗಿ ಎರಡು ವಿನೂತನ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸಾಮಾನ್ಯ ಬಣ್ಣಗಳನ್ನು ಹೊರತುಪಡಿಸಿ ಲಿಮಿಟೆಡ್ ಎಡಿಷನ್ ಥಾರ್ 700 ಮಾದರಿಯು ಅಕ್ವಾ ಮರಿನ್ ಮತ್ತು ನಪೊಲಿ ಬ್ಲ್ಯಾಕ್ ಬಣ್ಣಗಳಲ್ಲೂ ಖರೀದಿಸಬಹುದಾಗಿದ್ದು, ಆಫ್ ರೋಡ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.


Click it and Unblock the Notifications