ಹೊಸ ಕಾರುಗಳ ಉತ್ಪಾದನೆಯನ್ನು ಮತ್ತೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ
ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ಹೊಸ ಉತ್ಪಾದನಾ ಪ್ರಕ್ರಿಯೆ ಕೂಡಾ ಕುಂಟುತ್ತಾ ಸಾಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ ಸಹ ಹೊಸ ಕಾರುಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಿದೆ.

2019ರ ಅವಧಿಯಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಹೊಸ ವಾಹನ ಮಾರಾಟದಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸಿವೆ. ಅದರಲ್ಲೂ ಕಳೆದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿನ ಹೊಸ ವಾಹನಗಳ ಮಾರಾಟವು ಪ್ರಮಾಣವು ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ತೀವ್ರ ಕುಸಿತ ಕಂಡಿತ್ತು. ಇದರಿಂದ ಮಾರಾಟವಾಗದೇ ಉಳಿದ ಸ್ಟಾಕ್ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಬಹುತೇಕ ಆಟೋ ಸಂಸ್ಥೆಗಳು ತಮ್ಮ ಹೊಸ ವಾಹನಗಳ ಉತ್ಪಾದನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿ ಸ್ಟಾಕ್ ಕರಗಿಸಲು ಪ್ರಯತ್ನದಲ್ಲಿವೆ.

ಹೌದು, ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು 2019ರ ಆರಂಭದಿಂದಲೇ ಹೊಸ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಮೇ ಅವಧಿಯಲ್ಲಿ ಅತಿ ಹೆಚ್ಚು ಹಿನ್ನಡೆಯಾಗಿದೆ. ಮಾಹಿತಿಗಳ ಪ್ರಕಾರ, ಶೇ. 20.5 ರಷ್ಟು ಹೊಸ ಪ್ಯಾಸೆಂಜರ್ ವಾಹನಗಳ ಮಾರಾಟ ಪ್ರಮಾಣವು ಕುಸಿತ ಕಂಡಿದ್ದು, 2001ರಿಂದ ಇದು ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ಮಾರಾಟ ಕುಸಿತ ದಾಖಲಾಗಿದೆ.

2018ರ ಮೇ ಅವಧಿಯಲ್ಲಿ ದೇಶಾದ್ಯಂತ 3,01,238 ಹೊಸ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಅದೇ 2019ರ ಮೇ ಅವಧಿಯಲ್ಲಿ 2,39,347 ಹೊಸ ಪ್ಯಾಸೆಂಜರ್ ವಾಹನಗಳು ಮಾತ್ರವೇ ಮಾರಾಟವಾಗುವ ಮೂಲಕ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಮತ್ತು ಹೊಸ ವಾಹನಗಳ ಖರೀದಿ ಮೇಲೆ ಜಾರಿ ಮಾಡಲಾದ ಕೆಲವು ಹೊಸ ನಿಯಮಗಳಿಂದಾಗಿ ವಾಹನಗಳ ಖರೀದಿ ಪ್ರಕಿಯೆಗೆ ಪ್ರತಿಕೂಲಕರ ವಾತಾವರಣ ನಿರ್ಮಾಣವಾಗಿದ್ದರಿಂದ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನಿಗದಿತ ಮಟ್ಟದ ಗುರಿ ಮುಟ್ಟಲು ಸಾಧ್ಯವಾಗದೇ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಮಾರಾಟವಾಗದೇ ಉಳಿದಿರುವ ಸ್ಟಾಕ್ ಪ್ರಮಾಣವನ್ನು ಕರಗಿಸಲು ಕೆಲವು ಕಠಿಣ ನಿರ್ಣಯಗಳನ್ನು ತಗೆದುಕೊಳ್ಳುತ್ತಿವೆ.

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಲೋಕಸಭಾ ಚುನಾವಣೆ ನಂತರ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡುಬರುತ್ತಿದ್ದರೂ ಸಹ ಸ್ಟಾಕ್ ಪ್ರಮಾಣ ಮಾತ್ರ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಬಹುತೇಕ ಕಾರು ಸಂಸ್ಥೆಗಳು ವಿವಿಧ ಮಾದರಿಯ ಆಫರ್ ನೀಡುವ ಮೂಲಕ ಮಾರಾಟದ ಸಂಖ್ಯೆಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದು, ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಹೀಗಾಗಿಯೇ ಸದ್ಯಕ್ಕೆ ಹೊಸ ಕಾರು ಮತ್ತು ಬೈಕ್‌ಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನಂತೆಯೇ ಕಠಿಣ ಕ್ರಮ ಕೈಗೊಂಡಿದ್ದು, ಮಾರುಕಟ್ಟೆಯ ಚೇತರಿಕೆ ನಂತರವಷ್ಟೇ ಮತ್ತೆ ಉತ್ಪಾದನೆಯನ್ನು ಶುರು ಮಾಡಲಿದೆ.

ಆಟೋ ಉತ್ಪಾದನಾ ಸಂಸ್ಥೆಗಳ ಪ್ರಕಾರ, ಹೊಸದಾಗಿ ಉತ್ಪಾದನೆ ಮಾಡಲಾದ ವಾಹನಗಳನ್ನು ಕೇವಲ 3 ತಿಂಗಳು ಕಾಲ ಸ್ಟಾಕ್ ಮಾತ್ರವೇ ಆರೋಗ್ಯಕಾರಿಯಾಗಿದ್ದು, ತದನಂತರದ ಆ ಸ್ಟಾಕ್ ಪ್ರಮಾಣವು ಆರ್ಥಿಕವಾಗಿ ಹೊರೆ ಎಂದು ಪರಿಗಣಿಸಲಾಗುತ್ತದೆ.

ಇದರಿಂದ ಈಗಾಗಲೇ ಐದಾರು ತಿಂಗಳಿನಿಂದ ಸರಿಯಾದ ಪ್ರಮಾಣದಲ್ಲಿ ಹೊಸ ವಾಹನಗಳು ಮಾರಾಟವಾಗದಿರುವುದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ತಲೆ ನೋವಾಗಿ ಪರಿಣಮಿಸಿದ್ದು, ಆಟೋ ಉದ್ಯಮವು ಸಹಜ ಸ್ಥಿತಿಯತ್ತ ಮರಳಲು ಮುಂದಿನ ಎರಡರಿಂದ ಮೂರು ತಿಂಗಳ ಕಾಲ ಸಮಯಾವಕಾಶ ಬೇಕು ಎನ್ನಲಾಗುತ್ತಿದೆ.


Click it and Unblock the Notifications