ಹ್ಯುಂಡೈ ಕೊನಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಎಂಜಿ ಮೋಟಾರ್ ಇಜೆಡ್ಎಸ್
ದೇಶಾದ್ಯಂತ ಸದ್ಯ ಕೈಗೆಟುವಕುವ ದರಗಳಲ್ಲಿ ಅತಿ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಗ್ರಾಹಕರು ಎದುರು ನೋಡುತ್ತಿದ್ದು, ಆಟೋ ಉತ್ಪಾದನಾ ಸಂಸ್ಥೆಗಳು ಸಹ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ.

ಭಾರತದಲ್ಲಿ ಸದ್ಯ ಮಹೀಂದ್ರಾ ಸಂಸ್ಥೆ ಮಾತ್ರ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ನಿಸ್ಸಾನ್, ಎಂಜಿ ಮೋಟಾರ್ ಸಂಸ್ಥೆಗಳು ಸಹ ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿವೆ. ಇವುಗಳಲ್ಲಿ ಕೆಲವು ದುಬಾರಿ ಬೆಲೆಯೊಂದಿಗೆ ಉತ್ತಮ ಮೈಲೇಜ್ ಪ್ರೇರಣೆಯ ಬ್ಯಾಟರಿ ಸೌಲಭ್ಯ ಹೊಂದಲಿದ್ದು, ಇನ್ನು ಕೆಲವು ಕಾರು ಮಾದರಿಗಳು ಕೈಗೆಟುಕುವ ಬೆಲೆಗಳೊಂದಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ತವಕದಲ್ಲಿವೆ.

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಹೊಸ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳಲ್ಲಿ ಎಂಜಿ (ಮೊರಿಸ್ ಗ್ಯಾರೆಜ್) ಮೋಟಾರ್ ಕೂಡಾ ಒಂದು.

ಯುರೋಪ್ ಮಾರುಕಟ್ಟೆಯಲ್ಲಿ 1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಈ ಹಿನ್ನೆಲೆ ನಷ್ಟದ ಸುಳಿಯಲ್ಲಿದ್ದ ಬ್ರಿಟಿಷ್ ಆಟೋ ಉತ್ಪಾದನಾ ಸಂಸ್ಥೆಯನ್ನು ಚೀನಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಎಸ್‌ಎಐಸಿ( SAIC) ಸಂಸ್ಥೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ 2ನೇ ತ್ರೈಮಾಸಿಕ ಅವಧಿಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಈಗಾಗಲೇ ಹೊಸ ಯೋಜನೆ ರೂಪಿಸಿದ್ದು, 2020ರ ಆರಂಭದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇಜೆಡ್ಎಸ್ ಬಿಡುಗಡೆ ಮಾಡಲಿದೆ.

ಇಜೆಡ್ಎಸ್ ಕಾರು ಈಗಾಗಲೇ ಚೀನಿ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಎರಡು ಮಾದರಿಯ ಮೈಲೇಜ್ ರೇಂಜ್ ಪ್ರೇರಣೆಯ ಬ್ಯಾಟರಿ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 300ಕಿ.ಮಿ ನೀಡುವ ಆರಂಭಿಕ ಆವೃತ್ತಿ ಇಲ್ಲವೇ ಪ್ರತಿ ಚಾರ್ಜ್‌ಗೆ 420 ಕಿ.ಮಿ ಮೈಲೇಜ್ ನೀಡುವ ಹೈ ಎಂಡ್ ಮಾದರಿಯನ್ನು ಖರೀದಿಸಬಹುದು.
MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಈ ಸಂಬಂಧ ಭಾರತದಲ್ಲಿ ತನ್ನ ಹೊಸ ಕಾರು ಉತ್ಪನ್ನಗಳ ಬಗೆಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಂಬಂಧ ದೇಶದ ವಿವಿಧ ನಗರಗಳಲ್ಲಿ ಹೊಸ ಕಾರುಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಿರುವುದಲ್ಲದೇ ಅತ್ಯುತ್ತಮ ದರಗಳಲ್ಲಿ ಖರೀದಿಗೆ ಲಭ್ಯವಾಗುವ ಸುಳಿವು ನೀಡಿದೆ.

ಎಂಜಿ ಮೋಟಾರ್ಸ್ ಸದ್ಯ ಹೆಕ್ಟರ್ ಎನ್ನುವ ಎಸ್‌ಯುವಿ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದ್ದು, ತದನಂತರವಷ್ಟೇ ಇಜೆಡ್ಎಸ್ ಎಲೆಕ್ಟ್ರ್ಕಿಕ್ ಕಾರು ಬಿಡುಗಡೆಯಾಗಲಿದೆ. ಹೀಗಾಗಿ ಇಜೆಡ್ಎಸ್ ಕಾರು ಹ್ಯುಂಡೈ ನಿರ್ಮಾಣದ ಕೊನಾ ಕಾರಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ.
MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!

ಇನ್ನು ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ದೇಶದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಮೈಲೇಜ್ ರೇಂಜ್ ಆಧಾರದ ಮೇಲೆ ಕಾರಿನ ಬೆಲೆಯು ರೂ.18 ಲಕ್ಷದಿಂದ ರೂ.25 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಹೊಸ ಕಾರಿನ ದರ ನಿಗದಿ ಮೇಲೆ ಭಾರತದಲ್ಲಿ ಎಂಜಿ ಮೋಟಾರ್ ಭವಿಷ್ಯ ನಿರ್ಧಾರವಾಗಲಿದೆ.


Click it and Unblock the Notifications