ಅನಾವರಣಗೊಂಡ ಮಿನಿ ಕೂಪರ್ ಎಲೆಕ್ಟ್ರಿಕ್ ಕಾರುಗಳು
ಬಿಎಂಡಬ್ಲ್ಯು ಗ್ರೂಪ್, ಮಿನಿ ರಾಕೆಟ್‍ಮನ್ ಕಾರುಗಳನ್ನು ಅಭಿವೃದ್ದಿಪಡಿಸಿ ಉತ್ಪಾದಿಸಲು ಹಸಿರು ನಿಶಾನೆ ತೋರಿಸಿದೆ. ಹೊಸ ಮಿನಿ ರಾಕೆಟ್‍ಮನ್ ಕಾರು, ಅಲ್ಟ್ರಾ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನವಾಗಿದ್ದು, 2011ರಲ್ಲಿ ಪ್ರದರ್ಶನಗೊಂಡಿದ್ದ ರಾಕೆಟ್‍ಮನ್ ಕಾನ್ಸೆಪ್ಟ್ ಮೇಲೆ ಆಧಾರಿತವಾಗಿದೆ. ಮಿನಿ ಕೂಪರ್ ಎಸ್‌ಇ ಕಾರ್ ಅನ್ನು ಅನಾವರಣಗೊಳಿಸಿದ ಕೆಲವೇ ದಿನಗಳ ನಂತರ ಈ ಸುದ್ದಿ ಬಂದಿದ್ದು, ಇದು ಮೊದಲ ಆಲ್ ಎಲೆಕ್ಟ್ರಿಕ್ ಮಿನಿ ವಾಹನವಾಗಿರಲಿದೆ.

ಮಿನಿ ಕಾರು 1959ರಲ್ಲಿ ಬ್ರಿಟಿಷ್ ಮೋಟಾರ್ ಕಾರ್ಪೊರೇಷನ್ ನಿರ್ಮಿಸಿದ ಕಾಂಪ್ಯಾಕ್ಟ್ ಎಕಾನಮಿ ಹ್ಯಾಚ್‌ಬ್ಯಾಕ್ ಆಗಿ ಪ್ರಾರಂಭವಾಯಿತು. ಒಂದು ದಶಕದ ನಂತರ, ಅದು ತನ್ನದೇ ಆದ ಉತ್ಪನ್ನಗಳೊಂದಿಗೆ ಸ್ವತಂತ್ರವಾದ ಕಂಪನಿಯಾಗಿ ಮಾರ್ಪಟ್ಟಿತು. ಈ ಕಾರು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗಿದ್ದು ಮಾತ್ರವಲ್ಲದೇ, ಮಾಂಟೆ ಕಾರ್ಲೊ ರ್‍ಯಾಲಿ ಸೇರಿದಂತೆ ಅನೇಕ ಮಹತ್ವದ ರ್‍ಯಾಲಿಗಳನ್ನು ಗೆದ್ದುಕೊಂಡಿದೆ.

ಮಿನಿ ಕೂಪರ್ ಹಾಗೂ ಮಿನಿ ಕೂಪರ್ ಎಸ್ ಕಾರುಗಳು, ಪೆಪ್ಪಿ ಲಿಟಲ್ ಎಂಜಿನ್ ಹಾಗೂ ಹಗುರವಾದ ಬಾಡಿಯನ್ನು ಹೊಂದಿ ಬಹಳ ಯಶಸ್ವಿಯಾಗಿವೆ. ಕೂಪರ್ ಹಾಗೂ ಕೂಪರ್ ಎಸ್ ತಮ್ಮ ಸೆಗ್‍ಮೆಂಟಿನಲ್ಲಿರುವ ಫನ್ ಟು ಡ್ರೈವ್ ಕಾರುಗಳಾಗಿವೆ. ಮಿನಿ ಸರಣಿಯು ಗಮನಾರ್ಹವಾಗಿ ಬೆಳೆದಿದ್ದು, ಮಿನಿ ಕೂಪರ್, ಮಿನಿ ಕಂಟ್ರಿಮ್ಯಾನ್, ಮಿನಿ ಕ್ಲಬ್‌ಮ್ಯಾನ್ ಸೇರಿದಂತೆ ಹಲವಾರು ಕಾರುಗಳನ್ನು ವಿವಿಧ ಸೆಗ್‍ಮೆಂಟುಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮಿನಿ ಕಂಪನಿಯು ಯಾವುದೇ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿಲ್ಲದ ಕೊರತೆಯನ್ನು ಎದುರಿಸುತ್ತಿತ್ತು.

ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿದ್ದು, ಮಿನಿ ಕಂಪನಿಯು ಈ ಸೆಗ್‍ಮೆಂಟಿನಲ್ಲಿ ಉಳಿಯಬೇಕಾದರೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ. ಮಿನಿ ಕೂಪರ್ ಎಸ್‌ಇ ಕಾರ್ ಅನ್ನು ಅನಾವರಣಗೊಳಿಸುವ ಮೂಲಕ ಕಂಪನಿಯು ಎಲೆಕ್ಟ್ರಿಕ್ ಸೆಗ್‍ಮೆಂಟಿಗೆ ಕಾಲಿಟ್ಟಿದೆ. 2022ರ ಹೊತ್ತಿಗೆ ಮಿನಿ ರಾಕೆಟ್‌ಮ್ಯಾನ್ ಎಂಬ ಚಿಕ್ಕದಾದ, ಹೆಚ್ಚು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನವು ಬಿಡುಗಡೆಯಾಗಲಿದೆ ಎಂದು ಬ್ರಿಟಿಷ್ ಮೂಲದ ಕಂಪನಿಯು ತಿಳಿಸಿದೆ.

ಮಿನಿ ಕೂಪರ್ ಎಸ್‌ಇ
ಮಿನಿ ಕೂಪರ್ ಎಸ್ಇ ಕಾರು, ಪೆಪ್ಪಿ ಟರ್ಬೊ ಪೆಟ್ರೋಲ್ ಎಂಜಿನ್ ಬದಲಿಗೆ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಮಿನಿ ಕೂಪರ್ ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದೆ. ಹೊಸ, ವಿಶಿಷ್ಟ ಡಿಸೈನ್ ಲ್ಯಾಂಗ್ವೇಜ್‍ಗೆ ಹೋಗುವ ಬದಲು ಮಿನಿ ಅಸ್ತಿತ್ವದಲ್ಲಿರುವ ವಿನ್ಯಾಸವನ್ನೆ ಮುಂದುವರೆಸಲು ಬಯಸಿದೆ. ಇದರಿಂದ ಈಗಿರುವ ಗ್ರಾಹಕರು ಕಂಪನಿಯ ಜೊತೆಗೆ ಇರಲು ಬಯಸುತ್ತಾರೆ ಎಂಬುದು ಕಂಪನಿಯ ಅನಿಸಿಕೆಯಾಗಿದೆ.

ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಹೊಂದಿರಲಿದೆ. ಮಿನಿ ಕೂಪರ್ ಎಸ್‌ಇ ಕಾರಿನಲ್ಲಿ ಗ್ರೇ ಹಾಗೂ ನಿಯಾನ್ ಬಣ್ಣದ ಥೀಮ್‌ನ ಹೊಸ ಗ್ರಿಲ್ ಅಳವಡಿಸಲಾಗಿದೆ. ಮಿನಿ ಎಸ್‍ಇ ಕಾರಿನಲ್ಲಿ ಏರ್ ಇನ್‍ಟೇಕ್ ಇಲ್ಲದಿದ್ದರೂ ಹುಡ್ ಸ್ಕೂಪ್ ಅನ್ನು ಮುಂದುವರಿಸಲು ನಿರ್ಧರಿಸಿದೆ. ಈ ಫೀಚರ್ ಎಲೆಕ್ಟ್ರಿಕ್ ಮೋಟರ್ ಅನ್ನು ತಂಪಾಗಿಸಲು ಸಹಾಯಕವಾಗಲಿದೆ.

ಈ ಕಾರು ನಿಯಾನ್ ಬಣ್ಣದ ಮಿರರ್ ಹೌಸಿಂಗ್ಸ್ ಹಾಗೂ ಹಿಂಭಾಗದಲ್ಲಿ ಇ ಬ್ಯಾಡ್ಜ್ ಅನ್ನು ಒಳಗೊಂಡಿದೆ. ಮಿನಿ ಕೂಪರ್ ಎಸ್ಇ ಕಾರು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಹೊಸ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎಸಿ ಹಾಗೂ ಡಿಸಿ ಚಾರ್ಜಿಂಗ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎರಡೂ ಆಯ್ಕೆಗಳಿಗೆ ನೀಡಲಾಗಿರುವ ಪೋರ್ಟ್‍ಗಳು ಫ್ಯೂಯಲ್ ಫಿಲ್ಲರ್ ಕ್ಯಾಪ್ ಒಳಗೆ ಇವೆ. ಹಿಂಭಾಗದ ಬಂಪರ್ ಅನ್ನು ಟ್ವಿನ್ ಎಕ್ಸಾಸ್ಟ್ ಔಟ್‍ಲೆಟ್‍ಗಳಿಲ್ಲದ ಕಾರಣಕ್ಕೆ ಮರುವಿನ್ಯಾಸಗೊಳಿಸಲಾಗಿದೆ.

ಇಂಟಿರಿಯರ್‍ಗಳನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಮಿನಿ ಕೂಪರ್ ಎಸ್ ನಂತೆಯೇ ವಿನ್ಯಾಸಗೊಳಿಸಲಾಗಿದೆ. ಟಾಪ್ ಮಾದರಿಯ ಕಾರಿನಲ್ಲಿ 8.8 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಲೆದರ್ ಅಪ್ ಹೊಲೆಸ್ಟರಿ, ಪನೋರಮಿಕ್ ಸನ್‌ರೂಫ್, ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್, ಹೆಡ್ಸ್ ಅಪ್ ಡಿಸ್‍ಪ್ಲೇ, ಹರ್ಮಾನ್ ಕಾರ್ಡನ್ ಸ್ಟೀರಿಯೋ ಸಿಸ್ಟಂ ಮುಂತಾದ ಫೀಚರ್‍ಗಳಿವೆ. ಎಲೆಕ್ಟ್ರಿಕ್ ಮೋಟರ್ ಅನ್ನು ಮೂಲ ಕಂಪನಿಯ ಬಿಎಂಡಬ್ಲ್ಯು ಐ 3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನಿಂದ ತೆಗೆದುಕೊಳ್ಳಲಾಗಿದೆ. ಇದು ಗರಿಷ್ಠ 184ಬಿಹೆಚ್‍ಪಿ ಪವರ್ ಹಾಗೂ 270ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

32.6ಕೆಡಬ್ಲ್ಯುಹೆಚ್ ಬ್ಯಾಟರಿಯಿಂದ ವಿದ್ಯುತ್ ಪಡೆಯುತ್ತದೆ. ಇದು ಫ್ರಂಟ್ ವೀಲ್ ಡ್ರೈವ್ ಕಾನ್ಫಿಗರೇಶನ್ ಹೊಂದಿದೆ. ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಚಾಲಿತ ಕೂಪರ್ ಎಸ್ ಕಾರಿನಲ್ಲಿರುವಂತಹ ಪರ್ಫಾಮೆನ್ಸ್ ನೀಡಲಿದೆ. 0-100 ಕಿ.ಮೀ ವೇಗವನ್ನು 7.3 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಟಾಪ್ ಸ್ಪೀಡ್ ಅನ್ನು 150ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ. ಒಂದು ಬಾರಿಯ ಚಾರ್ಜ್‍ನಿಂದ ಕೂಪರ್ ಎಸ್‌ಇ 235 ರಿಂದ 270 ಕಿಲೋಮೀಟರ್‍ವರೆಗೂ ಚಲಿಸಲಿದೆ ಎಂದು ಮಿನಿ ಹೇಳಿಕೊಂಡಿದೆ.

ಈ ಕಾರು ವೇಗದ ಚಾರ್ಜಿಂಗ್‌ಗೆ ಹೊಂದಿಕೊಳ್ಳುತ್ತದೆ. ಕೇವಲ 35 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಮಾಡಬಹುದು. ಸಾಮಾನ್ಯ ಚಾರ್ಜರ್ ಬಳಸಿದಾಗ, ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 3.5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಈ ಹ್ಯಾಚ್‌ಬ್ಯಾಕ್ - ಗ್ರೀನ್, ಮಿಡ್ ಹಾಗೂ ಸ್ಪೋರ್ಟ್ - ಎಂಬ ಮೂರು ಡ್ರೈವಿಂಗ್ ಮೋಡ್‌ಗಳೊಂದಿಗೆ ಬರಲಿದೆ. ಮಿನಿ ಕೂಪರ್ ಎಸ್ ಸೆಪ್ಟೆಂಬರ್‌ನಲ್ಲಿ ನಡೆಯುವ ಫ್ರಾಂಕ್‌ಫರ್ಟ್ ಮೋಟಾರ್ ಶೋನಲ್ಲಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಿದ್ದು, ನವೆಂಬರ್‌ನಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ.

ಮಿನಿ ರಾಕೆಟ್‌ಮ್ಯಾನ್ ಇವಿ
ಮಿನಿ ರಾಕೆಟ್‌ಮ್ಯಾನ್ ಇವಿ 2011ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಆಗಿ ಶುರುವಾಯಿತು. ಆದರೆ ಈ ಕಾರ್ ಅನ್ನು ಉತ್ಪಾದಿಸಲು ಮೂಲ ಕಂಪನಿ ಬಿಎಂಡಬ್ಲ್ಯುನಿಂದ ಅನುಮತಿ ನೀಡಿರಲಿಲ್ಲ. ಈಗ ಈ ಕಾರ್ ಅನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಈ ಕಾರು 2022ರ ವೇಳೆಗೆ, ಕೂಪರ್ ಎಸ್‌ಇ ಹೆಸರಿನಲ್ಲಿ ಉತ್ಪಾದನೆಗೆ ಹೋಗುವ ಸಾಧ್ಯತೆಗಳಿವೆ. ಈ ಕಾರು ಕೈಗೆಟುಕುವ ದರವನ್ನು ಹೊಂದಿರಲಿದೆ. ಮಿನಿ ರಾಕೆಟ್‌ಮ್ಯಾನ್ ಇವಿ ಚೀನಾದಲ್ಲಿ ಉತ್ಪಾದನೆಯಾಗಲಿದ್ದು, ಇತರ ದೇಶಗಳಿಗೆ ರಫ್ತು ಮಾಡಲಾಗುವುದು.

ಈ ಕಾರ್ ಅನ್ನು ಮೊದಲಿಗೆ ಬಿಎಂಡಬ್ಲ್ಯು ಹಾಗೂ ಪ್ಯೂಜೊ ಸಹಭಾಗಿತ್ವದಲ್ಲಿ ಎಂಜಿನ್ ಹಂಚಿಕೆ ಒಪ್ಪಂದದ ಮೂಲಕ ನಿರ್ಮಿಸಲು ಉದ್ದೇಶಿಸಲಾಗಿತ್ತು, ಆದರೆ ಈ ಒಪ್ಪಂದವು ಜಾರಿಗೆ ಬರಲೇ ಇಲ್ಲ. ಸಣ್ಣ ಪ್ರಮಾಣದ ಕಾಂಪ್ಯಾಕ್ಟ್ 3 ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ಗಳನ್ನು ಬಳಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕಾರನ್ನು ಶುದ್ಧ ವಿದ್ಯುತ್ ಮಾದರಿಯನ್ನಾಗಿ ತಯಾರಿಸಲಿದೆ.

ರಾಕೆಟ್‌ಮ್ಯಾನ್ ಚೀನಾದಲ್ಲಿ ತಯಾರಾಗಲಿದ್ದರೆ, ಕೂಪರ್ ಎಸ್‌ಇ ಅನ್ನು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು.


Click it and Unblock the Notifications








