ಶೇ.15ರಷ್ಟು ಮೈಲೇಜ್ ಹೆಚ್ಚಿಸಬಲ್ಲ ಹೊಸ ಹೈಬ್ರಿಡ್ ಎಂಜಿನ್ ಪರಿಚಯಿಸಿದ ಮಾರುತಿ ಸುಜುಕಿ
ಜಗತ್ತಿನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನಲೆ ಭವಿಷ್ಯದ ವಾಹನ ಮಾದರಿಗಳಿಗಾಗಿ ಮಾರುತಿ ಸುಜುಕಿ ಸಂಸ್ಥೆಯು ಹೊಸ ತಂತ್ರಜ್ಞಾನ ಪ್ರೇರಿತ ಹೈಬ್ರಿಡ್ ಪವರ್‌ಟ್ರೈನ್ ಅಭಿವೃದ್ದಿಗೊಳಿಸಿದೆ.

ಹೌದು, ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಸುಜುಕಿ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ವಿಫ್ಟ್ ಸ್ಪೋರ್ಟ್ ಮತ್ತು ವಿಟಾರ್ ಎಸ್‌ಯುವಿ ಕಾರು ಮಾದರಿಗಳಿಗಾಗಿ 48ವೋಲ್ಟ್ ಸ್ಪೆಲ್ಫ್ ಚಾರ್ಜ್ಡ್ ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, ಹೊಸ ಹೈಬ್ರಿಡ್ ಎಂಜಿನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಬ್ರೆಝಾ, ಸ್ವಿಫ್ಟ್, ಎಸ್-ಕ್ರಾಸ್ ಕಾರು ಮಾದರಿಗಳಿಗೂ ಜೋಡಣೆ ಮಾಡಲು ಉದ್ದೇಶಿಸಿದೆ.

ಮಾರುತಿ ಸುಜುಕಿಯು ಈಗಾಗಲೇ ಭಾರತದಲ್ಲಿ 16ವೊಲ್ಟ್ ಪ್ರೇರಿತ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ ಕಾರುಗಳನ್ನು ಮಾರಾಟಮಾಡುತ್ತಿದ್ದು, ಇದೀಗ ಹೊಸದಾಗಿ ಪರಿಚಯಿಸುತ್ತಿರುವ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಕಾರು ಖರೀದಿದಾರರನ್ನು ಆಕರ್ಷಿಸಲಿದೆ.

ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಕೆ14ಸಿ ಪೆಟ್ರೋಲ್ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಕಂಡಿದ್ದು, ಹಳೆಯ ಎಂಜಿನ್‌ಗಿಂತಲೂ ಹೊಸ ಎಂಜಿನ್‌ನಲ್ಲಿ 15 ಕಿಲೋ ತೂಕವನ್ನು ಕಡಿತಗೊಳಿಸಲಾಗಿದೆ.

ಈ ಮೂಲಕ ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಎಂಜಿನ್‌ಗಿಂತಲೂ ಶೇ.20 ರಷ್ಟು ಮಾಲಿನ್ಯ ಹೊರಸೂಸುವಿಕೆಯಲ್ಲಿ ಇಳಿಕೆ ಕಂಡಿರುವುದಲ್ಲದೇ ಶೇ.15ರಷ್ಟು ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತೆ ಮಾಡಿದೆ. ಇದರಿಂದ ಪೆಟ್ರೋಲ್ ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ನೀರಿಕ್ಷೆ ಮಾಡಬಹುದಾದ ಮೈಲೇಜ್ ಅನ್ನು ಈ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನಲ್ಲಿ ಪಡೆಯಬಹುದಲ್ಲದೇ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಇನ್ನು 2020ರ ಏಪ್ರಿಲ್‌ನಿಂದ ಬಿಎಸ್-6 ನಿಯಮವು ಕಡ್ಡಾಯವಾಗುತ್ತಿರುವ ಹಿನ್ನಲೆಯಲ್ಲಿ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ಹೊಸ ನಿಯಮ ಅನುಸಾರವಾಗಿ ಅಭಿವೃದ್ದಿಗೊಂಡಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಡೀಸೆಲ್ ಎಂಜಿನ್ ಬಿಡುಗಡೆಗೊಳಿಸುತ್ತಿದೆ.

ಬಿಎಸ್-6 ನಿಯಮ ಪಾಲನೆ ಸಾಧ್ಯವಿಲ್ಲದ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಕೈಬಿಡುತ್ತಿರುವ ಮಾರುತಿ ಸುಜುಕಿಯು ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ಆಯ್ದ ಕಾರು ಮಾದರಿಗಳಲ್ಲಿ ಮಾತ್ರವೇ ಹೊಸ ಮಾದರಿಯ ಡೀಸೆಲ್ ಎಂಜಿನ್ ಅಭಿವೃದ್ದಿಗೊಳಿಸಿದೆ.
MOST READ: ಐಷಾರಾಮಿ ಕಾರ್ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ

ಒಂದು ವೇಳೆ ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.
MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

ಹೀಗಾಗಿ ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಸಿಗಲಿದೆ.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಎಂಟ್ರಿ ಲೆವಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್, 1.4-ಲೀಟರ್ ಟರ್ಬೋ, 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮಾತ್ರ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯು, ಬಿಎಸ್-6 ನಂತರ ಬೆಲೆ ಹೆಚ್ಚಿದರೂ ಕೂಡಾ ಹೊಸ ಬದಲಾವಣೆಯೊಂದಿಗೆ ಕಾರು ಮಾರಾಟವು ಕುಸಿಯದಂತೆ ಎಂಜಿನ್ ಆಯ್ಕೆಗಳನ್ನು ಸಿದ್ದಪಡಿಸುತ್ತಿದೆ.


Click it and Unblock the Notifications