ಅದ್ದೂರಿಯಾಗಿ ಬಿಡುಗಡೆಗೊಂಡ ಟಾಟಾ ಬಹುನಿರೀಕ್ಷಿತ ಹ್ಯಾರಿಯರ್ ಕಾರು
ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೆ ಆದ ವಿಶೇಷ ಬೇಡಿಕೆ ಹೊಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಹೊಸ ಕಾರಿನ ಬೆಲೆಗಳು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಭಾರತೀಯ ಗ್ರಾಹಕರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ವಾಹನ ಉತ್ಪನ್ನಗಳಲ್ಲಿ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಹುಟ್ಟುಹಾಕುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹ್ಯಾರಿಯರ್ ಎಸ್‌ಯುವಿ ಮಾದರಿಯು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಲ್ಲಿದೆ.

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಹಾಗೆಯೇ ಕಾರಿನ ಹಿಂಬದಿಯ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಡಿಸ್ಕವರಿ ಸ್ಪೋರ್ಟ್‌ನಂತೆಯೇ ಹೊಲಿಕೆ ಪಡೆದುಕೊಳ್ಳುವ 'H A R R I E R' ಲೊಗೊ ಅಚ್ಚು, ರಿಯರ್ ಬಂಪರ್, ಸ್ಪಾಯ್ಲರ್‌ನೊಂದಿಗೆ ಶಾರ್ಕ್ ಫಿನ್ ಆ್ಯಂಟೆನಾ ಡಿಸೈನ್ ಆಕರ್ಷಕವಾಗಿವೆ.

ಇನ್ನು ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳನ್ನು ನಿಗದಿ ಮಾಡಲಾಗಿದೆ.

ಹ್ಯಾರಿಯರ್ ವೆರಿಯೆಂಟ್‌ಗಳು ಮತ್ತು ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)
| ವೆರಿಯೆಂಟ್‌ಗಳು | ಬೆಲೆಗಳು |
| ಹ್ಯಾರಿಯರ್ ಎಕ್ಸ್ಇ | ರೂ. 12.69 ಲಕ್ಷ |
| ಹ್ಯಾರಿಯರ್ ಎಕ್ಸ್‌ಎಂ | ರೂ. 13.75 ಲಕ್ಷ |
| ಹ್ಯಾರಿಯರ್ ಎಕ್ಸ್‌ಟಿ | ರೂ. 14.95 ಲಕ್ಷ |
| ಹ್ಯಾರಿಯರ್ ಎಕ್ಸ್‌ಜೆಡ್ | ರೂ. 16.25 ಲಕ್ಷ |

ಎಂಜಿನ್ ಸಾಮರ್ಥ್ಯ
ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ವೆರಿಯೆಂಟ್‌ಗಳು ಮತ್ತು ತಾಂತ್ರಿಕ ಸೌಲಭ್ಯಗಳು
ಹ್ಯಾರಿಯರ್ ಎಕ್ಸ್‌ಇ
ಆರಂಭಿಕ ಆವೃತ್ತಿಯಾಗಿರುವ ಹ್ಯಾರಿಯಲ್ ಎಕ್ಸ್‌ಇ ಕಾರುಗಳಲ್ಲಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್, 17-ಇಂಚಿನ ಫೈವ್ ಸ್ಪೋಕ್ ವ್ಹೀಲ್ಸ್, ಎಲ್ಇಡಿ ಟೈಲ್ ಲೈಟ್ಸ್, ಪವರ್ ಅಡ್ಜೆಸ್ಟೆಬಲ್ ಒಆರ್‍ವಿಎಂಗಳು, ಮ್ಯಾನುವಲ್ ಎಸಿ, ರಿಯರ್ ಎಸಿ ವೆಂಟ್ಸ್, ಪವರ್ ವಿಂಡೋಸ್, 4 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ ಒದಗಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.

ಹ್ಯಾರಿಯರ್ ಎಕ್ಸ್ಎಂ
ಎರಡನೇ ಮಾದರಿಯ ಎಕ್ಸ್ಎಂ ಆವೃತ್ತಿಯಲ್ಲಿ ಫ್ರಂಟ್ ಫಾಗ್ ಲ್ಯಾಂಪ್ಸ್, ಫಾಲೋ-ಮೀ-ಹೋಂ ಹೆಡ್‍ಲ್ಯಾಂಪ್ಸ್, ರಿಯರ್ ವೈಪರ್ಸ್, ಬೂಟ್ ಲ್ಯಾಂಪ್ಸ್, ರಿಯರ್ ಪಾರ್ಸಲ್ ಸೆಲ್ಫ್, 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಜೊತೆಗೆ ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮಲ್ಟಿ ಡ್ರೈವಿಂಗ್ ಮೋಡ್‍ಗಳನ್ನು ಪಡೆದುಕೊಂಡಿದೆ.

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಕ್ಸ್ಎಂ ಆವೃತ್ತಿಗಿಂತಲೂ ತುಸು ಹೆಚ್ಚಿನ ವೈಶಿಷ್ಟ್ಯತೆಗಳಿದ್ದು, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.

ಹ್ಯಾರಿಯರ್ ಎಕ್ಸ್‌ಟಿ
ಈ ವೇರಿಯೆಂಟ್‍ನಲ್ಲಿ ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್‍ಎಲ್, 17 ಇಂಚಿನ ಅಲಾಯ್ ವ್ಹೀಲ್ಸ್, ರಿಯರ್ ಡೀಫಾಗರ್, ಪುಶ್-ಬಟನ್ ಸ್ಟಾರ್ಟ್, 8 ವಿಧಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ಸ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಅಡ್ಜೆಸ್ಟೆಬಲ್ ಒಆರ್‍ವಿಎಂಗಳು ಮತ್ತು ರಿವರ್ಸ್ ಕ್ಯಾಮೆರಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಇದರಲ್ಲೂ ಕೂಡಾ ಸುರಕ್ಷತೆಗಾಗಿ ವಿವಿಧ ಮಾದರಿಯ ಸುಧಾರಿತ ಮಾದರಿಗಳನ್ನು ಒದಗಿಸಲಾಗಿದ್ದು, ಮೊದಲ ಎರಡು ವೆರಿಯೆಂಟ್‌ಗಳಾದ ಎಕ್ಸ್‌ಎಂ ಮತ್ತು ಎಕ್ಸ್ಇ ಆವೃತ್ತಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳು ಎಕ್ಸ್‌ಟಿ ಆವೃತ್ತಿಯಲ್ಲಿ ಜೋಡಣೆ ಮಾಡಲಾಗಿದೆ.

ಹ್ಯಾರಿಯರ್ ಎಕ್ಸ್‌ಜೆಡ್
ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಇದರಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

ಆಸನ ಸೌಲಭ್ಯ ಮತ್ತು ಬೂಟ್ ಸ್ಪೆಸ್ ಸಾಮರ್ಥ್ಯ
ಹ್ಯಾರಿಯರ್ ಕಾರುಗಳ ಒಳಾಂಗಣ ವಿಸ್ತಿರ್ಣವು ಪ್ರಮುಖ ಆಕರ್ಷಣೆಯಾಗಿದ್ದು, ಚಾಲಕ ಸೇರಿ ಒಟ್ಟು 5 ಜನ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದ್ದು, ಹಿಂಬದಿ ಸೀಟಿನಲ್ಲಿ ಆರ್ಮ್ ರೆಸ್ಟ್ ಸೌಲಭ್ಯವು ದೂರದ ಪ್ರಯಾಣಕ್ಕೆ ಅನುಕೂಲಕರ ಎನ್ನಿಸಲಿದೆ.

ಅಂತೆಯೇ ಬೂಟ್ ಸ್ಪೆಸ್ ಸೌಲಭ್ಯವು ಸಾಕಷ್ಟು ಅನುಕೂಲಕವಾಗಿದ್ದು, 425-ಲೀಟರ್ ಸಾಮರ್ಥ್ಯದ ಲಗೇಜ್ ಇಟ್ಟುಕೊಳ್ಳಬಹುದಾಗಿದೆ. ಒಂದು ವೇಳೆ ಲಗೇಜ್ ಹೆಚ್ಚು ಇದ್ದಲ್ಲಿ ಹಿಂಬದಿ ಸೀಟುಗಳನ್ನು ಮಡಿಕೆ ಮಾಡಿ 810-ಲೀಟರ್ ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಪ್ರೀಮಿಯಂ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications








