ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್
ಪಾಲ್ ವಾಕರ್ ವಿಶ್ವ ವಿಖ್ಯಾತ ನಟರಾಗಿದ್ದಾರೆ. ಹಾಲಿವುಡ್ ಚಿತ್ರಗಳನ್ನು ನೋಡುವವರಿಗೆ ಈ ಅಮೇರಿಕಾದ ನಟನ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ. ಪಾಲ್ ವಾಕರ್ ತಮ್ಮ ನಟನೆಯಿಂದ ಮಾತ್ರವಲ್ಲದೇ ತಮ್ಮ ಬಳಿಯಿರುವ ಕಾರು ಹಾಗೂ ಬೈಕ್‍ಗಳಿಗಾಗಿಯೂ ಹೆಸರುವಾಸಿಯಾಗಿದ್ದರು.

ಪಾಲ್ ವಾಕರ್ ಕಾರು ಹಾಗೂ ಬೈಕ್‍ಗಳ ಬಗ್ಗೆ ವಿಪರೀತ ಎನಿಸುವಷ್ಟು ಕ್ರೇಜ್ ಹೊಂದಿದ್ದರು. ಪಾಲ್ ವಾಕರ್‍ರವರು ಹೈ ಪರ್ಫಾಮೆನ್ಸ್ ವಾಹನಗಳ ಬಗ್ಗೆ ಹೆಚ್ಚು ಪ್ರೀತಿಯನ್ನು ಹೊಂದಿದ್ದರು. ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದ ಈ ನಟ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಸದಾ ನೆಲೆಸಲಿದ್ದಾರೆ.

ಪಾಲ್ ವಾಕರ್‍ರವರು ಹೈ ಪರ್ಫಾಮೆನ್ಸ್ ಕಾರು ಹಾಗೂ ಬೈಕ್‍ಗಳ ಬಗೆಗಿನ ತಮ್ಮ ಪ್ರೀತಿಯನ್ನು ತಮ್ಮ ಚಿತ್ರಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಹೊಂದಿದ್ದರು. ಈ ವಿಶ್ವ ವಿಖ್ಯಾತ ನಟನ ಮನೆಯ ಗ್ಯಾರೇಜಿನಲ್ಲಿ ಹಲವಾರು ವಿಧದ ವಾಹನಗಳಿವೆ.

ಇತ್ತೀಚಿಗೆ ಪಾಲ್ ವಾಕರ್‍ರವರ ಕಾರು ಹಾಗೂ ಬೈಕ್‍ಗಳನ್ನು ಹರಾಜ್ ಹಾಕಲಾಗಿತ್ತು. ಈ ಹರಾಜಿನಲ್ಲಿ ರೂ.16.40 ಕೋಟಿ ಸಂಗ್ರಹವಾಗಿದೆ. ಈ ಹರಾಜ್ ಅನ್ನು ಅಮೇರಿಕಾದ ಅರಿಜೋನಾದಲ್ಲಿ ನಡೆಸಲಾಗಿತ್ತು. ಪಾಲ್ ವಾಕರ್‍ರವರ ಎಲ್ಲಾ ವಾಹನಗಳು ಈ ಹರಾಜಿನಲ್ಲಿ ಮಾರಾಟವಾಗಿಲ್ಲ.

ಕೆಲವು ವಾಹನಗಳು ಮಾತ್ರ ಹರಾಜಿನಲ್ಲಿ ಮಾರಾಟವಾಗಿವೆ. ಈ ಹರಾಜಿನಲ್ಲಿ 23 ಲಕ್ಷ ಡಾಲರ್ ಸಂಗ್ರಹವಾಗಿದೆ ಎಂದು ಹರಾಜನ್ನು ನಡೆಸಿದ ಬರೆಟ್ ಜಾಕ್ಸನ್‍ನ ಸಿಇಒ ಕ್ರೆಗ್ ಜಾಕ್ಸನ್ ಹೇಳಿದ್ದಾರೆ. ಪಾಲ್ ವಾಕರ್‍ರವರ ಬಳಿ ಕಾರು ಹಾಗೂ ಬೈಕ್‍ಗಳು ಮಾತ್ರವಿರಲಿಲ್ಲ, ಬದಲಿಗೆ ಟ್ರಕ್‍ಗಳೂ ಸಹ ಇದ್ದವು.

ಪಾಲ್ ವಾಕರ್‍ರವರ ಬಳಿಯಿದ್ದ 21 ವಾಹನಗಳನ್ನು ಹರಾಜು ಹಾಕಲಾಗಿತ್ತು. ಈ ಹರಾಜು ಪ್ರಕ್ರಿಯೆಯು ಜನವರಿ 14ರಿಂದ 18ರವರೆಗೆ 5 ದಿನಗಳ ಕಾಲ ನಡೆದಿತ್ತು. ಪಾಲ್ ವಾಕರ್‍ರವರ ಬಳಿಯಿದ್ದ ಬಿಳಿ ಬಣ್ಣದ ಬಿಎಂಡಬ್ಲ್ಯು ಎಂ 3 ಲೈಟ್ ವೇಟ್ ಎಡಿಷನ್‍ನ 5 ಕಾರುಗಳನ್ನು ಸಹ ಹರಾಜು ಹಾಕಲಾಗಿತ್ತು.

ಈ ಪೈಕಿ 1995ರ ಮಾದರಿಯ ಇ36 ಕಾರಿಗೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಈ ಕಾರ್ ಅನ್ನು 3.85 ಲಕ್ಷ ಡಾಲರ್‍ಗಳಿಗೆ ಹರಾಜು ಹಾಕಲಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ರೂ.2.74 ಕೋಟಿ.

ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಪಾಲ್ ವಾಕರ್‍ರವರ ಪುತ್ರಿ ನಡೆಸುವ ಮಿಡೊ ರೇನ್ ವಾಕರ್ ಟ್ರಸ್ಟ್ ಗೆ ಕಳುಹಿಸಲಾಗಿದೆ. ಪಾಲ್ ವಾಕರ್‍ರವರ ಪುತ್ರಿ ಮಿಡೊ ರೇನ್ ವಾಕರ್‍ರವರಿಗೆ ಈಗ 21 ವರ್ಷ ವಯಸ್ಸು.

ಅಂದ ಹಾಗೆ ಪಾಲ್ ವಾಕರ್‍ರವರು ತಮ್ಮ 40ನೇ ವಯಸ್ಸಿನಲ್ಲಿ ಸಾಂಟಾ ಕ್ಲಾರಿಟಾದಲ್ಲಿ ನಡೆದ ಅಪಘಾತದಲ್ಲಿ ಮೃತರಾದರು. 2013ರಲ್ಲಿ ನಡೆದ ಈ ದುರ್ಘಟನೆಯಲ್ಲಿ ಪಾಲ್ ವಾಕರ್‍ರವರು ತಮ್ಮ ಪೋರ್ಷೆ ಕಾರೆರಾ ಜಿಟಿ ಕಾರಿನಲ್ಲಿ ಚಲಿಸುತ್ತಿದ್ದರು.

ಈ ದುರ್ಘಟನೆ ನಡೆದ ಸ್ಥಳವು ಕಾರುಗಳನ್ನು ಡ್ರಿಫ್ಟ್ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಕಾರು 80ರಿಂದ 93 ಮೈಲಿಯ ವೇಗದಲ್ಲಿ ಚಲಿಸಿದ್ದು ಹಾಗೂ ಟಯರ್‍ಗಳು ಹಳೆಯದಾಗಿದ್ದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.


Click it and Unblock the Notifications