ಕರೋನಾ ಎಫೆಕ್ಟ್- ಸ್ತಬ್ದಗೊಂಡ ದೇಶದ ಆಟೋಮೊಬೈಲ್ ಉದ್ಯಮ
ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಜನತಾ ಕರ್ಫ್ಯೂಗೆ ಕರೆಕೊಟ್ಟ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಿದೆ.

ಕರೋನಾ ವೈರಸ್ ಹರಡುವಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಣಾಮಕಾರಿ ತಡೆಗಾಗಿ ಜನಸಂಪರ್ಕವನ್ನು ಸಾಧ್ಯವಾದಷ್ಟು ತಗ್ಗಿಸಲಾಗುತ್ತಿದೆ. ಸಾಫ್ಟ್‌ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವ ಆಯ್ಕೆಯನ್ನು ನೀಡಲಾಗಿದ್ದು, ಉತ್ಪಾದನಾ ವಲಯದಲ್ಲಿನ ಕಾರ್ಮಿಕರಿಗೆ ಇಂತಹ ಆಯ್ಕೆ ಕಷ್ಟಸಾಧ್ಯ. ಇದರಿಂದಾಗಿ ಕೆಲವು ಕಡೆಗಳಲ್ಲಿ ಸಂಬಳ ಸಹಿತ ರಜೆ ಘೋಷಿಸಲಾಗಿದ್ದು, ಮುಂದಿನ ಆದೇಶದ ತನಕ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸದಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.

ಇದರಿಂದಾಗಿ ಕೈಗಾರಿಕೊದ್ಯಮವು ಸಂಪೂರ್ಣ ಸ್ತಬ್ದಗೊಂಡಿದ್ದು, ವೈರಸ್ ಮಹಾಮಾರಿಯಿಂದಾಗಿ ತಪ್ಪಿಸಿಕೊಳ್ಳಲು ಆಟೋಉತ್ಪಾದನಾ ಕಂಪನಿಗಳು ಕೂಡಾ ತಾತ್ಕಾಲಿಕವಾಗಿ ವಾಹನಗಳ ಉತ್ಪಾದನೆಯನ್ನು ಬಂದ್ ಮಾಡಿವೆ.

ಮಾರ್ಚ್ 31ರ ತನಕವು ಯಾವುದೇ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು, ಮಾರ್ಚ್ 31ರ ನಂತರವಷ್ಟೇ ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಉತ್ಪಾದನಾ ಚಟುವಟಿಕೆ ಮುಂದುವರಿಸಬೇಕೆ? ಅಥವಾ ಬೇಡ ಎಂಬುವುದನ್ನು ನಿರ್ಧರಿಸಲಿದ್ದಾರೆ.

ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ, ಟೊಯೊಟಾ, ಟಾಟಾ ಮೋಟಾರ್ಸ್, ಫೋರ್ಡ್, ಹೋಂಡಾ, ರೆನಾಲ್ಟ್ ಮತ್ತು ನಿಸ್ಸಾನ್, ಫೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಝ್, ಅಶೋಕ್ ಲೈಲ್ಯಾಂಡ್, ವೊಲ್ವೊ, ಹೀರೋ ಮೋಟೊಕಾರ್ಪ್, ಹೋಂಡಾ ಮೋಟಾರ್‌ಸೈಕಲ್, ಸುಜುಕಿ ಮೋಟಾರ್‌ಸೈಕಲ್, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಯಮಹಾ, ರಾಯಲ್ ಎನ್‌ಫೀಲ್ಡ್ ಕಂಪನಿಗಳು ಈಗಾಗಲೇ ಅಧಿಕೃತವಾಗಿಯೇ ವಾಹನ ಉತ್ಪಾದನೆ ಬಂದ್ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿವೆ.

ವೈರಸ್ ತಡೆಗಾಗಿ ಸರ್ಕಾರದ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸಿಬ್ಬಂದಿ ಮತ್ತು ಗ್ರಾಹಕರ ಆರೋಗ್ಯದ ಮೇಲೆ ಹೆಚ್ಚು ನಿಗಾವಹಿಸಿದ್ದು, ಬಂದ್ ನಡುವೆಯೂ ಕೆಲವು ಕಡೆಗಳಲ್ಲಿ ತುರ್ತು ಗ್ರಾಹಕ ಸೇವೆಗಳನ್ನು ಒದಗಿಸಲಾಗುತ್ತಿದೆ.

ಇನ್ನು ಕರೋನಾ ವೈರಸ್ ಅಟ್ಟಹಾಸದಿಂದ ಚೀನಾದಲ್ಲಿ ಈಗಾಗಲೇ ಬಹುತೇಕ ಆಟೋ ಕಂಪನಿಗಳು ತಮ್ಮ ಉತ್ಪಾದನಾ ಘಟಕವನ್ನು ಕಳೆದ 1 ತಿಂಗಳಿನಿಂದಲೇ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಯುರೋಪಿನಲ್ಲಿಯೂ ಸಹ ಹಲವಾರು ಆಟೋ ಕಂಪನಿಗಳು ತಮ್ಮ ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಭಾರತದಲ್ಲಿ ಕರೋನಾ ವೈರಸ್ ಪರಿಣಾಮವಾಗಿ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ದಿಯು ಕಳೆದ ಒಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಆಟೋ ಉದ್ಯಮವು ಪ್ರತಿ ದಿನ ರೂ.1,500 ಕೋಟಿಯಷ್ಟು ನಷ್ಟ ಎದುರಿಸುತ್ತಿದೆ.

ಇದಲ್ಲದೆ ಯುರೋಪ್ ರಾಷ್ಟ್ರಗಳಲ್ಲೂ ಕೂಡಾ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಫೋಕ್ಸ್‌ವ್ಯಾಗನ್, ನಿಸ್ಸಾನ್, ಆಡಿ, ಮರ್ಸಿಡಿಸ್ ಬೆಂಝ್, ಟೊಯೊಟಾ, ಸುಜುಕಿ, ಫಿಯೆಟ್ ಕ್ಲೈಸರ್, ರೆನಾಲ್ಟ್, ಬೆಂಟ್ಲಿ, ಡುಕಾಟಿ, ಪಿಎಸ್ಎ ಗ್ರೂಪ್‌ಗೆ ಸೇರಿದ 40ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳನ್ನು ಮುಂದಿನ ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ.


Click it and Unblock the Notifications








