ಭಾರತದಲ್ಲಿ 10 ಲಕ್ಷ ಯುನಿಟ್ ಮಾರಾಟ ಗಡಿದಾಟಿದ ಬಿಎಸ್-6 ವಾಹನಗಳ ಮಾರಾಟ ಪ್ರಮಾಣ
2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಅವಧಿಗೂ ಮುನ್ನವೇ ಬಿಎಸ್-6 ವಾಹನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಚಾಲನೆ ನೀಡಿರುವುದಲ್ಲದೆ ಹೊಸ ನಿಯಮ ಕಡ್ಡಾಯವಾಗುವುದಕ್ಕೂ ಮುನ್ನವೇ ಭಾರೀ ಪ್ರಮಾಣದಲ್ಲಿ ಮಾರಾಟಮಾಡಿವೆ.

ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಭಾರತೀಯ ಆಟೋ ಉತ್ಪಾದನಾ ಕಂಪನಿಗಳಿಗೆ ಖಡಕ್ ಆದೇಶ ನೀಡಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ವಾಹನಗಳನ್ನು ಮಾರಾಟ ಮಾಡಬೇಕೆಂಬ ಆದೇಶವನ್ನು ನೀಡಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಕಳೆದ ವರ್ಷದ ಆರಂಭದಿಂದ ಕೆಲವು ವಾಹನ ಕಂಪನಿಗಳು ಬಿಎಸ್-6 ವಾಹನ ಮಾರಾಟಕ್ಕೆ ಚಾಲನೆ ನೀಡಿದ್ದಲ್ಲಿ ಇನ್ನು ಕೆಲವು ವಾಹನ ಕಂಪನಿಗಳು ಕಳೆದ ಎರಡು ತಿಂಗಳ ಹಿಂದಷ್ಟೇ ಹೊಸ ಮಾದರಿಯ ವಾಹನಗಳ ಮಾರಾಟವನ್ನು ಶುರು ಮಾಡಿವೆ.

ದೇಶದ ಪ್ರಮುಖ ಕಾರು ಕಂಪನಿಗಳಲ್ಲಿ ಮಾರುತಿ ಸುಜುಕಿಯು ಅತಿ ಕಡಿಮೆ ಸಮಯದಲ್ಲೇ ಬಿಎಸ್-6 ಪೆಟ್ರೋಲ್ ಕಾರುಗಳ ಮಾರಾಟವನ್ನು ಶುರು ಮಾಡಿದ್ದಲ್ಲದೆ ಇದುವರೆಗೆ 7.50 ಲಕ್ಷ ಕಾರುಗಳ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಇನ್ನುಳಿದ 2.50 ಲಕ್ಷ ಕಾರುಗಳು ಇತರೆ ಕಾರು ಕಂಪನಿಗಳಿಗೆ ಸೇರಿವೆ.

ಹೀಗಿದ್ದರೂ ಕೂಡಾ ಬಹುತೇಕ ಕಾರು ಕಂಪನಿಗಳು ಬಿಎಸ್-4 ವಾಹನಗಳನ್ನು ನಿಗದಿತ ಅವಧಿಯೊಳಗೆ ಮಾರಾಟ ಮಾಡಲು ಸಾಧ್ಯವಾಗದೆ ಸ್ಟಾಕ್ ಹೊರೆ ಅನುಭವಿಸುತ್ತಿದ್ದು, ಕರೋನಾ ವೈರಸ್ ವ್ಯಾಪಕವಾಗಿ ಹರಡಿದ ಹಿನ್ನಲೆ ವಿಧಿಸಲಾದ ಲಾಕ್ ಡೌನ್ ನಿರ್ಧಾರವು ಆಟೋ ಕಂಪನಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಏಪ್ರಿಲ್ 1ರಿಂದಲೇ ಬ್ಯಾನ್ ಆಗಬೇಕಿದ್ದ ಬಿಎಸ್-4 ವಾಹನಗಳ ಮಾರಾಟಕ್ಕೆ ಸದ್ಯ ವಿನಾಯ್ತಿ ನೀಡಿರುವ ಸುಪ್ರೀಂಕೋರ್ಟ್ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಬಿಎಸ್-6 ವಾಹನ ಕಡ್ಡಾಯ ಮಾಡುವುದರ ಜೊತೆಗೆ ನಿಗದಿತ ಅವಧಿಯೊಳಗೆ ಬಿಎಸ್-4 ವಾಹನಗಳ ಮಾರಾಟಕ್ಕೂ ಕೆಲವು ಷರತ್ತುಗಳೊಂದಿಗೆ ವಿನಾಯ್ತಿ ನೀಡಿದೆ. ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ಬ್ಯಾನ್ ನಷ್ಟ ತಡೆಗೆ ಸಹಕರಿಸಿದ್ದು, ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದೆ.

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

ಪ್ರತಿ ಆಟೋ ಕಂಪನಿಗಳು ತಮ್ಮ ಬಳಿ ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕೆಂದು ಖಡಕ್ ಸೂಚನೆ ನೀಡಲಾಗಿದ್ದು, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ರೂ. 6,500 ಕೋಟಿ ಮೌಲ್ಯದ ಸುಮಾರು 7.50 ಲಕ್ಷ ಬಿಎಸ್-4 ವಾಹನಗಳ ಸ್ಟಾಕ್ ಹಾಗೆಯೇ ಇದೆ.

ಇದರಲ್ಲಿ ಇದೀಗ ಲಾಕ್ ಡೌನ್ ತೆರವುಗೊಳಿಸಿದ ನಂತರ ಶೇ.10 ರಷ್ಟು ಪ್ರಮಾಣದ ವಾಹನಗಳು ಮಾರಾಟಗೊಂಡರು ಸಹ ಇನ್ನುಳಿದ ಶೇ.90ರಷ್ಟು ಸ್ಟಾಕ್ ವಾಹನಗಳಿಂದ ಭಾರೀ ಪ್ರಮಾಣದ ನಷ್ಟ ಉಂಟಾಗಲಿದ್ದು, ಆಟೋ ಕಂಪನಿಗಳ ಮನವಿಯನ್ನು ಈಗಾಗಲೇ ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಮಾಲಿನ್ಯ ತಡೆಗಾಗಿ ಹಳೆಯ ವಾಹನಗಳಿಗೆ ಬ್ರೇಕ್ ಹಾಕುವುದೇ ಮುಖ್ಯ ಎಂದಿದೆ.


Click it and Unblock the Notifications