ರಾಜಧಾನಿಯಲ್ಲಿ ರಸ್ತೆಗಿಳಿಯಲಿವೆ 9,000 ಹೊಸ ಬಸ್ಸುಗಳು
ಮುಂದಿನ ಒಂದು ವರ್ಷದಲ್ಲಿ 9,000 ಹೊಸ ಬಸ್‌ಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ನಿಯೋಜಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 100 ಹೊಸ ಲೋ ಫ್ಲೋರ್ ಎಸ್ ಬಸ್‍ಗಳಿಗೆ ಚಾಲನೆ ನೀಡಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಈ ವೇಳೆ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್‍ರವರು ಉಪಸ್ಥಿತರಿದ್ದರು. ರಾಜ್‌ಘಾಟ್ ಡಿಪೋದಿಂದ ಈ ಬಸ್‍ಗಳಿಗೆ ಚಾಲನೆ ನೀಡಲಾಯಿತು. ಈ ಬಸ್‌ಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು, ಅಗ್ನಿಶಾಮಕ ವ್ಯವಸ್ಥೆಗಳು, ರಿಮೋಟ್ ಮಾನಿಟರಿಂಗ್ ಸಿಸ್ಟಂ, ಜಿಪಿಎಸ್ ಟ್ರ್ಯಾಕರ್‍ಗಳು, ಪ್ಯಾನಿಕ್ ಬಟನ್, ಸಿಸಿಟಿವಿ ವಿಶೇಷ ಚೇತನರಿಗಾಗಿ ಹೈಡ್ರಾಲಿಕ್ ಲಿಫ್ಟ್ ಹಾಗೂ ವ್ಹೀಲ್‍ಚೇರ್‍ಗಳನ್ನು ನೀಡಲಾಗಿದೆ.

ದೆಹಲಿಯಲ್ಲಿ 9,000 ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಳಿಸಿದ ನಂತರ ದೆಹಲಿಯ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯುಂಟಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್‍ರವರು ಇದೇ ವೇಳೆ ಹೇಳಿದರು. ಲೋ ಫ್ಲೋರ್‍ನ 100 ಹೊಸ ಎಸಿ ಬಸ್ಸುಗಳಿಗೆ ಚುನಾವಣೆಯ ಕಾರಣದಿಂದಾಗಿ ಚಾಲನೆ ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು.

ಆದರೆ ಚುನಾವಣೆಯ ನಂತರವೂ ಬಸ್ಸುಗಳನ್ನು ನಿಯೋಜಿಸಲಾಗುತ್ತಿದೆ. ದೆಹಲಿ ಸರ್ಕಾರವು ಮುಂದಿನ ವರ್ಷದೊಳಗೆ 9,000 ಬಸ್ಸುಗಳನ್ನು ದೆಹಲಿಯಲ್ಲಿ ರಸ್ತೆಗಿಳಿಸಲಿದೆ. ದೆಹಲಿಯ ಸಾರಿಗೆ ಕ್ಷೇತ್ರವನ್ನು ಮಾದರಿ ಹಾಗೂ ಆಧುನಿಕ ವಲಯವನ್ನಾಗಿ ಪರಿವರ್ತಿಸುವುದಾಗಿ ಎಂದು ಕೇಜ್ರಿವಾಲ್‍ರವರು ಹೇಳಿದರು.

ಚುನಾವಣೆಯ ನಂತರ, ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗಿದ್ದು, ದೆಹಲಿಯ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯುಂಟುಮಾಡುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಎಲೆಕ್ಟ್ರಾನಿಕ್ ಬಸ್‌ಗಳ ಟೆಂಡರ್ ಸಹ ಅಂಗೀಕರಿಸಲ್ಪಟ್ಟಿದೆ. ಮಾರ್ಚ್ ಅಂತ್ಯದ ವೇಳೆಗೆ ಹೊಸ ಎಲೆಕ್ಟ್ರಾನಿಕ್ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಹೇಳಿದರು.

ಈ ಬಸ್ಸುಗಳು 37 ಸೀಟು, ಹೈಡ್ರಾಲಿಕ್ ಲಿಫ್ಟ್‌ಗಳನ್ನು ಹೊಂದಿವೆ. ಇದರ ಜೊತೆಗೆ 14 ಪ್ಯಾನಿಕ್ ಬಟನ್, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಬಸ್ಸುಗಳು ಬೆಂಕಿಯನ್ನು ಪತ್ತೆ ಮಾಡುವ ಹಾಗೂ ಅವುಗಳನ್ನು ನಿಗ್ರಹಿಸುವ ಸಿಸ್ಟಂ ಹೊಂದಿವೆ.

ಈಗ ಚಾಲನೆ ನೀಡಲಾಗಿರುವ 100 ಬಸ್ಸುಗಳು ನಗರದಾದ್ಯಂತ 16 ವಿವಿಧ ರೂಟ್‍ಗಳಲ್ಲಿ ಚಲಿಸಲಿದ್ದು, ಸುಲ್ತಾನಪುರಿ ಟರ್ಮಿನಲ್ ಹಾಗೂ ಸೆಂಟ್ರಲ್ ಟರ್ಮಿನಲ್ ನಡುವೆ ಹೆಚ್ಚು ಬಸ್ಸುಗಳು ಚಲಿಸಲಿವೆ. ಜೆಬಿಎಂ ಆಟೋ ಲಿಮಿಟೆಡ್ ತಯಾರಿಸಿರುವ ಈ ಬಸ್ಸುಗಳು ಸಿಎನ್‍ಜಿಯಿಂದ ಚಾಲನೆಗೊಳ್ಳಲಿವೆ.

ಈ ಲೋ ಫ್ಲೋರ್ ಸಿಎನ್‌ಜಿ ಎಸಿ ಬಸ್‍ಗಳಿಗೆ ಮೊದಲ ಬಾರಿಗೆ ಕ್ಲಸ್ಟರ್ ಯೋಜನೆಯಡಿಯಲ್ಲಿ ಚಾಲನೆ ನೀಡಲಾಗಿದ್ದು, ಇಂದಿನಿಂದ ಸೇವೆಯಲ್ಲಿ ಇರಲಿವೆ ಎಂದು ಜೆಬಿಎಂ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿಶಾಂತ್ ಆರ್ಯ ತಿಳಿಸಿದರು.

ನಗರದಾದ್ಯಂತ ವಿವಿಧ ಹಂತಗಳಲ್ಲಿ ಒಟ್ಟು 400 ಬಸ್‌ಗಳನ್ನು ನಿಯೋಜಿಸಲಾಗುವುದು. ಈಗ ಚಾಲನೆ ನೀಡಲಾಗಿರುವ 100 ಬಸ್ಸುಗಳು ಸೇರಿದಂತೆ ಒಟ್ಟು 250 ಬಸ್ಸುಗಳು ಮಾರ್ಚ್ ಅಂತ್ಯದ ವೇಳೆಗೆ ರಸ್ತೆಯಲ್ಲಿ ಸಂಚರಿಸಲಿವೆ ಎಂದು ಅವರು ಹೇಳಿದರು.

ಈ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ಗಮನ ನೀಡಲಾಗಿದ್ದು, ಪ್ಯಾನಿಕ್ ಹಾಗೂ ಸೇಫ್ಟಿ ಬಟನ್ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಈ ಬಸ್ಸುಗಳಲ್ಲಿ ಮೊಬೈಲ್ ಚಾರ್ಜಿಂಗ್ ಸೌಲಭ್ಯ ಹಾಗೂ ಕ್ಯಾಂಟಿಲಿವರ್ ಮೌಂಟೆಡ್ ಸೀಟ್‍ಗಳನ್ನು ನೀಡಲಾಗಿದೆ.


Click it and Unblock the Notifications