ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ ಇಇಎಸ್ಎಲ್
ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕವಾಗಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ತೀವ್ರ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ವಾತಾವರಣವಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದ್ದು, ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ವಿವಿಧ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಆಯಾಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾಗಿದೆ.

ಕಳೆದ ಫೆಬ್ರುವರಿಯಲ್ಲೇ ಹೊಸ ಯೋಜನೆಗಾಗಿ ಬಿಎಸ್ಎನ್ಎನ್ ಸಂಸ್ಥೆಯ ಜೊತೆಗೂಡಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದ ಇಇಎಸ್ಎಲ್ ಸಂಸ್ಥೆಯು ಮಾರ್ಚ್‌ನಲ್ಲಿ ಹೊಸ ಯೋಜನೆಗೆ ಅಧಿಕೃತವಾಗಿ ನೀಡುವ ಯೋಜನೆಯಲ್ಲಿತ್ತು.

ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ಯೋಜನೆಯನ್ನು ತಟಸ್ಥವಾಗಿಟ್ಟದ್ದ ಇಇಎಸ್ಎಲ್ ಸಂಸ್ಥೆಯು ಇದೀಗ ನೋಯ್ಡಾ ಅಭಿವೃದ್ದಿ ಪ್ರಾಧಿಕಾರದ ಜೊತೆಗೂಡಿ ಮರುಚಾಲನೆ ನೀಡುತ್ತಿದ್ದು, ಯೋಜನೆಯ ಮೊದಲ ಹಂತವಾಗಿ ನೋಯ್ಡಾದಲ್ಲಿ 13 ಚಾರ್ಜಿಂಗ್ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ನೀಡಲು ಮುಂದಾಗಿದೆ.

2021ರ ಒಳಗಾಗಿ ದೇಶಾದ್ಯಂತ ಒಟ್ಟು 1 ಸಾವಿರ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಅನುಗುಣವಾಗಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಮಾಡಲಿದೆ.

ಇನ್ನು ಮಹಾಮಾರಿ ವೈರಸ್‌ನಿಂದಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಆಟೋ ಉತ್ಪಾದನಾ ವಲಯ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಈ ಹಿನ್ನಲೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಹಲವಾರು ವಿನಾಯ್ತಿ ಘೋಷಣೆ ಮಾಡಿವೆ.

ಆಟೋ ಉತ್ಪಾದನಾ ವಲಯಕ್ಕೆ ನೀಡಲಾಗಿರುವ ವಿನಾಯ್ತಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ನೀಡಲಾಗುವ ಫೇಮ್-2 ಯೋಜನೆಯ ಸಬ್ಸಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2019-20ರ ಆರ್ಥಿಕ ವರ್ಷದ ಫೇಮ್-2 ಸಬ್ಸಡಿ ಅವಧಿಯು ಮಾರ್ಚ್‌ಗೆ ಅಂತ್ಯಗೊಳ್ಳಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸಿದ್ದರಿಂದ ಇದೀಗ ಸಬ್ಸಡಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಸುತ್ತೋಲೆ ಪ್ರಕಾರ, ವಿಸ್ತರಣೆಗೊಂಡ ಫೇಮ್-2 ಸಬ್ಸಡಿಯು ಜುಲೈ 1ರಿಂದ ಸೆಪ್ಟೆಂಬರ್ 30ರ ತನಕ ಅನ್ವಯವಾಗಲಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಆಟೋ ಕಂಪನಿಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೂ ಈ ಹೊಸ ಯೋಜನೆ ಅಡಿ ಸಬ್ಸಡಿ ಲಭ್ಯವಿರುತ್ತದೆ.

ಭಾರತವು ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ಕ್ಕೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದ್ದು, ಭವಿಷ್ಯದ ಗುರಿಗಾಗಿ ಈಗಿನಿಂದಲೇ ಹಲವಾರು ಕಠಿಣ ಕ್ರಮಗಳ ಮೂಲಕ ಹಂತ-ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಖರೀದಿದಾರರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್-2 ಯೋಜನೆ ಅಡಿ ಈಗಾಗಲೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗಾಗಿ(2019-21) ರೂ. 10 ಸಾವಿರ ಕೋಟಿ ವಿನಿಯೊಗಿಸುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯು ಮತ್ತೊಂದು ಹಂತದ ಬೆಳವಣಿಗೆ ಕಾರಣವಾಗಲಿದೆ.


Click it and Unblock the Notifications