ಮಹೀಂದ್ರಾ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ಫೋರ್ಡ್ ಇಕೋಸ್ಪೋರ್ಟ್
ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿರುವುದರಿಂದ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ವಿನೂತನ ಮಾದರಿಯ ಹೊಸ ಎಸ್‌ಯುವಿ ಕಾರುಗಳ ಅಭಿವೃದ್ಧಿಗೆ ಮುಂದಾಗಿದ್ದು, ಆಟೋ ದಿಗ್ಗಜ ಸಂಸ್ಥೆಗಳು ಹೊಸ ಕಾರು ಅಭಿವೃದ್ದಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾಗಿರುವಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಕೂಡಾ ಸಹಭಾಗಿತ್ವದ ಯೋಜನೆ ಅಡಿ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸಿವೆ.

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಭವಿಷ್ಯದ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿರುವ ಉಭಯ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಸಹಕರಿಸುವ ಮೂಲಕ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.

ಜೊತೆಗೆ ಮಹೀಂದ್ರಾ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳಿಗೆ ಎಂಜಿನ್ ಮತ್ತು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಪರಸ್ಪರ ಸಹಕರಿಸಲು ನಿರ್ಧರಿಸಿದ್ದು, ಈ ಯೋಜನೆಯ ಭಾಗವಾಗಿ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿವೆ. ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಜಂಟಿ ಕಾರು ಆವೃತ್ತಿಯನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 7 ವಿವಿಧ ನಮೂನೆಯ ಹೊಸ ಎಸ್‌ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆಯೆಂತೆ.

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫೋರ್ಡ್ ಇಕೋಸ್ಪೋರ್ಟ್ ಆವೃತ್ತಿಗೆ ಮಹೀಂದ್ರಾ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲು ನಿರ್ಧರಿಸಿದ್ದು, ಬಿಎಸ್-6 ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಇಕೋಸ್ಪೋರ್ಟ್‌ನಲ್ಲಿದ್ದ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಕೆಲವು ದಿನಗಳ ಹಿಂದಷ್ಟೇ ಸ್ಥಗಿತಗೊಳಿಸಲಾಗಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಬದಲಾಗಿ ಮಹೀಂದ್ರಾ ಹೊಸದಾಗಿ ಅಭಿವೃದ್ದಿ ಪಡಿಸಿರುವ 1.2-ಲೀಟರ್ ಎಂಸ್ಟಾಲಿನ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಇಕೋಸ್ಪೋರ್ಟ್‌ನಲ್ಲಿ ಪರಿಚಯಿಸಲು ನಿರ್ಧರಿಸಲಾಗಿದ್ದು, ಹೊಸ ಎಂಜಿನ್ ಮಾದರಿಯು 130-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಹೊಸ ಎಂಸ್ಟಾಲಿನ್ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಇದು ಸ್ಥಗಿತಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚುವರಿಯಾಗಿ 5-ಬಿಎಚ್‌ಪಿ ಮತ್ತು 60-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಂಸ್ಟಾಲಿನ್ ಎಂಜಿನ್ ಮಾದರಿಯನ್ನು ವಿಶೇಷವಾಗಿ ಎಕ್ಸ್‌ಯುವಿ300 ಸ್ಪೋರ್ಟ್ಜ್ ಕಾರು ಮಾದರಿಗಾಗಿ ಅಭಿವೃದ್ದಿಗೊಳಿಸಿರುವ ಮಹೀಂದ್ರಾ ಸಂಸ್ಥೆಯು ಅದೇ ಎಂಜಿನ್ ಅನ್ನು ಸಹಭಾಗಿತ್ವದಲ್ಲಿ ಅಭಿವೃದ್ದಿಗೊಳಿಸಲಾಗುವ ಇಕೋಸ್ಪೋರ್ಟ್ ಆವೃತ್ತಿಯಲ್ಲೂ ಜೋಡಣೆ ಮಾಡಲಿದೆ.

ಹೊಸ ಎಂಸ್ಟಾಲಿನ್ ಎಂಜಿನ್ ಮೊದಲು ಎಕ್ಸ್‌ಯುವಿ300 ಮಾದರಿಯಲ್ಲಿ ಬಿಡುಗಡೆಗೊಳ್ಳಲಿದ್ದು, 2021ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಸಹಭಾಗಿತ್ವದ ಮೊದಲ ಕಾರು ಮಾದರಿಯಾದ ಇಕೋಸ್ಪೋರ್ಟ್‌ನಲ್ಲೂ ಹೊಸ ಎಂಜಿನ್ ಜೋಡಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ಆವೃತ್ತಿಗಳಾಗಿ ಹೊರಹೊಮ್ಮಲಿರುವ ಎಕ್ಸ್‌ಯುವಿ300 ಮತ್ತು ಇಕೋಸ್ಪೋರ್ಟ್ ಆವೃತ್ತಿಗಳು ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹೊಸದಾಗಿ ಬಿಡುಗಡೆಯಾಗುತ್ತಿರುವ ನಿಸ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿಗೂ ಇವು ಪೈಪೋಟಿ ನೀಡಲಿವೆ.


Click it and Unblock the Notifications








