ರಾ.ಹೆದ್ದಾರಿ ಪ್ರಾಧಿಕಾರಕ್ಕೆ ಪ್ರತಿದಿನ ರೂ.3.50 ಲಕ್ಷ ದಂಡಪಾವತಿಸುತ್ತಿದ್ದಾರೆ ರಾಜ್ಯ ವಾಹನ ಸವಾರರು
ಹೆದ್ದಾರಿಗಳಲ್ಲಿ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದರೂ ಸಹ ವಾಹನ ಸವಾರರು ಮಾತ್ರ ದುಪ್ಪಟ್ಟು ಹಣ ಪಾವತಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರತಿ ದಿನ ಕೋಟಿ-ಕೋಟಿ ಆದಾಯ ಹರಿದುಬರುತ್ತಿದ್ದು, ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರೂ ಸಹ ವಾಹನ ಸವಾರರು ಮಾತ್ರ ಹೊಸ ಸೌಲಭ್ಯ ಅಳವಡಿಸಿಕೊಳ್ಳುತ್ತಿಲ್ಲ.

ಸುಮಾರು ಮೂರು ಗಡವುಗಳ ನಂತರ ಜನವರಿ 15ರಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದರೂ ಸಹ ಇದುವರೆಗೂ ಸುಮಾರು ಶೇ. 50ರಷ್ಟು ವಾಹನಗಳಲ್ಲೂ ಹೊಸ ಸೌಲಭ್ಯವು ಅಳಡಿಕೆಯಾಗಿಲ್ಲ. ಇದರ ಪರಿಣಾಮ ಹೆದ್ದಾರಿ ಪ್ರಾಧಿಕಾರದ ಆದಾಯದಲ್ಲಿ ಭಾರೀ ಏರಿಕೆಯಾಗಿದ್ದು, ಎಲೆಕ್ಟ್ರಾನಿಕ್ ಟೋಲ್ ಲೈನ್‌ಗಳಲ್ಲಿ ಹಾಯ್ದು ಹೋಗುವ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಂದ ಭಾರೀ ಪ್ರಮಾಣದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗಿದೆ.

ದೇಶಾದ್ಯಂತ ವಿವಿಧ ಟೋಲ್ ಪ್ಲಾಜಾಗಳಲ್ಲಿ ಇದುವರೆಗೆ ಸುಮಾರು ರೂ.25 ಕೋಟಿ ಹಣವನ್ನು ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರಿಂದ ವಸೂಲಿ ಮಾಡಲಾಗಿದ್ದು, ಕರ್ನಾಟಕದಲ್ಲೂ ದಂಡ ಪಾವತಿ ಮಾಡುವವರ ಸಂಖ್ಯೆಗೆನು ಕಡಿಮೆ ಇಲ್ಲ.

ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಶೇ.65 ರಷ್ಟು ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿದ್ದರೂ ಸಹ ಪ್ರತಿ ದಿನ ರೂ.3.50 ಲಕ್ಷ ಹೆಚ್ಚುವರಿಯಾಗಿ ದಂಡದ ರೂಪದಲ್ಲಿ ಆದಾಯ ಹರಿದುಬರುತ್ತಿದ್ದು, ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರಿಂದ ದಿನಂಪ್ರತಿ ಲಕ್ಷ-ಲಕ್ಷ ದಂಡ ವಸೂಲಿ ಮಾಡಲಾಗುತ್ತಿದೆ.

ಆದರೆ ಕಳೆದ ಜನವರಿ ತಿಂಗಳ ಅವಧಿಯಲ್ಲಿನ ದಂಡ ಪ್ರಮಾಣಕ್ಕಿಂತಲೂ ಮಾರ್ಚ್ ಅವಧಿಯಲ್ಲಿ ದಂಡ ವಸೂಲಿ ಪ್ರಮಾಣದಲ್ಲಿ ಇಳಿಕೆಯಾಗಿರುವ ಬಗ್ಗೆ ಖಚಿತಪಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಕಳೆದ ಎರಡು ತಿಂಗಳ ಅವಧಿಯಲ್ಲಿ ಹೊಸದಾಗಿ ಶೇ.15ರಷ್ಟು ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖರೀದಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಫಾಸ್ಟ್‌ಟ್ಯಾಗ್ ಅಳವಡಿಕೆಯಲ್ಲಿನ ಬೆಳವಣಿಗೆಯ ಕುರಿತು ವಿಶ್ಲೇಷಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಈ ಹಿಂದಿಗಿಂತಲೂ ಟೋಲ್ ಪ್ಲಾಜಾಗಳಲ್ಲಿನ ಕಾಯುವಿಕೆ ಅವಧಿಯು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದಿದೆ.

ಜೊತೆಗೆ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಯಾವುದೇ ವಿಳಂಬವಾಗದಂತೆ ಎಲ್ಲ ರೀತಿಯ ಕ್ರಮಕೈಗೊಂಡಿರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಕರ್ನಾಟಕದಲ್ಲಿರುವ ಟೋಲ್ ಪ್ಲಾಜಾಗಳಿಂದ ದಿನಂಪ್ರತಿ ರೂ.5.80 ಕೋಟಿ ಶುಲ್ಕ ಸಂಗ್ರಹವಾಗುತ್ತಿದೆ.

ಇನ್ನು ಫಾಸ್ಟ್‌ಟ್ಯಾಗ್ ಸೌಲಭ್ಯ ವಿತರಣೆಯ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೆಟ್ರೋಲ್ ಬಂಕ್, ಆರ್‌ಟಿಒ ಆಫೀಸ್ ಮತ್ತು ಟೋಲ್ ಪ್ಲಾಜಾಗಳಲ್ಲಿ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ತುರ್ತಾಗಿ ವಿತರಣೆ ಮಾಡುತ್ತಿದೆ.

ಫಾಸ್ಟ್‌ಟ್ಯಾಗ್ ಸೌಲಭ್ಯದ ನಂತರ NHAI ಆದಾಯದಲ್ಲಿ ಏರಿಕೆ
ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಪ್ರತಿದಿನ ರೂ.68 ಕೋಟಿ ಸರಾಸರಿ ಆದಾಯ ಗಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಪ್ರತಿದಿನ ಸರಾಸರಿಯಾಗಿ ರೂ.82 ಕೋಟಿಯಷ್ಟು ಆದಾಯ ಗಳಿಕೆ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗುವಾಗ ಟೋಲ್‌ಗಳಲ್ಲಿನ ಆರ್‌ಎಫ್‌ಐಡಿ ರಾಡರ್ ಮೂಲಕ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತಗೊಳ್ಳುತ್ತದೆ.

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಖಾತೆಯನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ.


Click it and Unblock the Notifications








