ವಿದೇಶಿ ಮಾರುಕಟ್ಟೆಯಲ್ಲೂ 'ಮೇಡ್ ಇನ್ ಇಂಡಿಯಾ' ಸೆಲ್ಟೊಸ್ ಕಾರಿಗೆ ಭರ್ಜರಿ ಬೇಡಿಕೆ
ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಸೆಲ್ಟೊಸ್ ಕಾರು ಮಾರಾಟದ ಮೂಲಕ ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಅಭಿವೃದ್ದಿಗೊಂಡಿರುವ ಮೇಡ್ ಇನ್ ಇಂಡಿಯಾ ಸೆಲ್ಟೊಸ್ ಕಾರಿಗೆ ವಿದೇಶಿ ಮಾರುಕಟ್ಟೆಗಳಲ್ಲೂ ಭಾರೀ ಬೇಡಿಕೆ ಹರಿದುಬರುತ್ತಿದೆ.

ಹೌದು, ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಡುಗಡೆಯಾದ ಕೇವಲ 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 45 ಸಾವಿರ ಯುನಿಟ್ ಮಾರಾಟಗೊಂಡಿದೆ. ದೇಶಿಯ ಮಾರುಕಟ್ಟೆ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಭಾರತದಿಂದಲೇ ಕಾರು ರಫ್ತು ಆರಂಭಿಸಿರುವ ಕಿಯಾ ಸಂಸ್ಥೆಯು ಇದುವರೆಗೆ 7 ಸಾವಿರ ಯುನಿಟ್‌ಗಳನ್ನು ಮಧ್ಯಪ್ರಾಚ್ಯ, ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಮಾರಾಟ ಮಾಡಿದೆ.

ಕಳೆದ ತಿಂಗಳು ಡಿಸೆಂಬರ್‌ನಲ್ಲಿ ರಫ್ತು ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಿದ್ದ ಕಿಯಾ ಸಂಸ್ಥೆಯು 6,341 ಯುನಿಟ್‌ಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೇವಲ 4,500 ಯುನಿಟ್ ಮಾರಾಟ ಮಾಡಿತ್ತು.

ವಿದೇಶಿ ಮಾರುಕಟ್ಟೆಗಳ ಬೇಡಿಕೆ ಅನುಗುಣವಾಗಿ ಉತ್ಪಾದನಾ ಪ್ರಮಾಣದಲ್ಲಿ ಕೆಲವು ಬದಲಾವಣೆಗಳನ್ನು ಕೈಗೊಳ್ಳುತ್ತಿರುವ ಕಿಯಾ ಸಂಸ್ಥೆಯು ವರ್ಷಾಂತ್ಯದಲ್ಲಿ ರಫ್ತು ಪ್ರಕ್ರಿಯೆಗೆ ಆದ್ಯತೆ ನೀಡಿದ್ದು, ಇದೀಗ ಹೊಸ ವರ್ಷದ ಅವಧಿಯಲ್ಲಿ ಮತ್ತೆ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯ ಆದ್ಯತೆ ಮೇರೆಗೆ ಕಾರು ವಿತರಣೆಯನ್ನು ಹೆಚ್ಚಿಸಿದೆ.

ಒಟ್ಟಿನಲ್ಲಿ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗುತ್ತಿರುವ ಕಿಯಾ ಸೆಲ್ಟೊಸ್ ಭಾರೀ ಬೇಡಿಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಬುಕ್ಕಿಂಗ್ ಪಡೆದುಕೊಂಡ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಆಕರ್ಷಕ ಬೆಲೆ, ಆರಂಭದಲ್ಲೇ ಬಿಎಸ್-6 ಎಂಜಿನ್ ಆಯ್ಕೆ ಮತ್ತು ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ ಎನ್ನಬಹುದು.

ದೆಹಲಿ ಎಕ್ಸ್‌ಶೋರೂಂ ಸೆಲ್ಟೊಸ್ ಕಾರು ಆರಂಭಿಕವಾಗಿ ರೂ. 9.89 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 17.34 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ ಒಟ್ಟು 9 ವೆರಿಯೆಂಟ್‌ಗಳನ್ನು ಹೊಂದಿದೆ.

ಸೆಲ್ಟೊಸ್ ಕಾರು ಸದ್ಯ ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

ಸುರಕ್ಷಾ ಸೌಲಭ್ಯಗಳು
ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಸೆಲ್ಟೊಸ್ ಬೆಲೆಯಲ್ಲಿ ಹೆಚ್ಚಳ
ಇನ್ನು ಹೆಚ್ಚುತ್ತಿರುವ ವಾಹನ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಹೊಸ ವರ್ಷದಿಂದ ಸೆಲ್ಟೊಸ್ ಕಾರು ಬೆಲೆಯಲ್ಲಿ ತುಸು ಹೆಚ್ಚಳ ಮಾಡಿದ್ದು, ಕಿಯಾ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಶೇ.2ರಿಂದ ಶೇ.3ರಷ್ಟು ಬೆಲೆ ಹೆಚ್ಚಳ ಮಾಡಿರುವುದು ಹೊಸ ಕಾರುಗಳ ಖರೀದಿ ತುಸು ದುಬಾರಿಯಾಗಿದೆ.

ಹೊಸ ದರ ಪಟ್ಟಿ ಪ್ರಕಾರ, ಕಿಯಾ ಸೆಲ್ಟೊಸ್ ಕಾರು ರೂ.20 ಸಾವಿರದಿಂದ ರೂ.35 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದಿದ್ದು, ಬೆಲೆ ಹೆಚ್ಚಳ ನಂತರ ಸೆಲ್ಟೊಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.69 ಲಕ್ಷದಿಂದ ರೂ.9.89 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ದರವು ಜನವರಿ 1ರಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದ್ದು, ಡಿಸೆಂಬರ್ 31ರ ಒಳಗಾಗಿ ಬುಕ್ಕಿಂಗ್ ಮಾಡಿರುವ ಎಲ್ಲಾ ಗ್ರಾಹಕರಿಗೂ ಹಳೆಯ ದರದಲ್ಲೇ ಕಾರು ವಿತರಣೆಯಾಗಲಿದೆ.


Click it and Unblock the Notifications