ಕರೋನಾ ವೈರಸ್ ಪರಿಣಾಮ ಎಂಜಿ ಕಾರು ಮಾರಾಟದಲ್ಲಿ ಭಾರೀ ಕುಸಿತ
ಚೀನಾದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸೈಕ್ ಮೋಟಾರ್ಸ್ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಬ್ರಿಟಿಷ್ ಆಟೋ ಕಂಪನಿ ಎಂಜಿ ಮೋಟಾರ್ ಕಾರು ಮಾರಾಟದಲ್ಲಿ ಭಾರೀ ಇಳಿಕೆ ಕಂಡಿದ್ದು, ಫೆಬ್ರುವರಿ ತಿಂಗಳಿನಲ್ಲಿ ಗರಿಷ್ಠ ಪ್ರಮಾಣದ ಹಿನ್ನಡೆ ಅನುಭವಿಸಿದೆ.

ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ದಿನದಿಂದ ಇದುವರೆಗೆ ಪ್ರತಿ ತಿಂಗಳು ಸರಾಸರಿಯಾಗಿ 3,200 ರಿಂದ 3,500 ಹೆಕ್ಟರ್ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ತಿಂಗಳು ಫೆಬ್ರುವರಿಯಲ್ಲಿ ಮಾತ್ರ ಕಾರು ಮಾರಾಟದಲ್ಲಿ ಒಂದೇ ಬಾರಿಗೆ ಶೇ.70ರಷ್ಟು ಕುಸಿತ ಕಂಡಿದೆ. ಫೆಬ್ರುವರಿ ಅವಧಿಯಲ್ಲಿ ಕೇವಲ 1,218 ಯುನಿಟ್ ಮಾತ್ರ ಮಾರಾಟ ಮಾಡಿಲಾಗಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು 150 ಯುನಿಟ್ ಮಾರಾಟಗೊಂಡಿದೆ.

ಎಂಜಿ ಹೊಸ ಕಾರುಗಳಿಗೆ ಬೇಡಿಕೆಯಿದ್ದರೂ ಗ್ರಾಹಕರ ಬೇಡಿಕೆಯೆಂತೆ ಪೂರೈಕೆ ಮಾಡಲು ಹರಸಾಹಸಪಡುತ್ತಿದ್ದು, ಕರೋನಾ ವೈರಸ್ ಪರಿಣಾಮ ಕಾರು ಉತ್ಪಾದನೆಯಲ್ಲಿಯಲ್ಲಿ ಕುಂಠಿತಗೊಂಡಿರುವುದು ಸ್ಪಷ್ಟವಾಗಿದೆ.

ಭಾರತದಲ್ಲಿ ಹೆಕ್ಟರ್ ಕಾರಿಗೆ ಇದುವರೆಗೆ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದ್ದರೂ ಇದುವರೆಗೆ ಕೇವಲ 25 ಸಾವಿರ ಯುನಿಟ್ ಮಾತ್ರವೇ ವಿತರಣೆ ಮಾಡಲಾಗಿದೆ. ಹಾಗೆಯೇ ಹೊಸ ಜೆಡ್ಎಸ್ ಕಾರಿಗೆ ಮೂರು ಸಾವಿರಕ್ಕೂ ಅಧಿಕ ಬುಕ್ಕಿಂಗ್ ದಾಖಲಾಗಿವೆ.

ಎಂಜಿ ಮೋಟಾರ್ ಕಾರು ಉತ್ಪಾದನೆಯಲ್ಲಿ ಪ್ರಮುಖ ಬೀಡಿಭಾಗಗಳು ಚೀನಿ ಮಾರುಕಟ್ಟೆಯಿಂದಲೇ ಆಮದುಗೊಳ್ಳಬೇಕಿರುವುದೇ ಕಾರು ಉತ್ಪಾದನೆಯಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದ್ದು, ವೈರಸ್ ಹರಡುವ ಭೀತಿಯಿಂದಾಗಿ ಸಾಗರೋತ್ತರ ವ್ಯವಹಾರಗಳನ್ನು ನಿರ್ಬಂಧಿಸಿರುವುದು ಬೀಡಿಭಾಗಗಳ ಕೊರತೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಇತರೆ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಹೆಚ್ಚು ಬೀಡಿಭಾಗಗಳನ್ನು ಚೀನಿ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳುವ ಎಂಜಿ ಸಂಸ್ಥೆಗೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಹಿನ್ನಡೆಯಾಗಿದೆ.

ಹೀಗಾಗಿ ಹೊಸ ವಾಹನಗಳಿಗೆ ಭಾರೀ ಬೇಡಿಕೆಯಿದ್ದರೂ ಸಹ ಬಿಡಿಭಾಗಗಳ ಕೊರತೆಯು ಆಟೋ ಉತ್ಪಾದನಾ ಸಂಸ್ಥೆಗಳನ್ನು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದ್ದು, ಚೀನಾದಲ್ಲಿ ತಲೆದೊರಿರುವ ಕರೋನಾ ವೈರಸ್ ಅಟ್ಟಹಾಸವು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ.

ವಿಶ್ವದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳ ಆಮದು ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರೋನಾ ವೈರಸ್‌ನಿಂದಾಗಿ ಚೀನಾದಲ್ಲಿನ ಪ್ರಮುಖ ಆಟೋ ಬೀಡಿಭಾಗಗಳ ಉತ್ಪಾದನಾ ಕಂಪನಿಗಳು ಕದಮುಚ್ಚಿದ್ದು, ಬೀಡಿಭಾಗಗಳ ತಯಾರಿಕೆ ಮಾಡುವ ನೂರಾರು ಸಿಬ್ಬಂದಿ ಈಗಾಗಲೇ ಕರೋನಾ ವೈರಸ್ ದಾಳಿಗೆ ಬಲಿಯಾಗಿದ್ದಾರೆ.

ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಚೀನಾದಲ್ಲಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಬಂದ್ ಮಾಡಿದ್ದು, ಕರೋನಾ ವೈರಸ್ ಹತೋಟಿಗೆ ಬರುವ ತನಕವು ಆಟೋ ವಲಯದಲ್ಲಿನ ಕುಸಿತವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.


Click it and Unblock the Notifications