ದೆಹಲಿಗಿಂತ ಐದು ಪಟ್ಟು ಹೆಚ್ಚು ವಾಹನಗಳನ್ನು ಹೊಂದಿದೆ ಮುಂಬೈ
ಮುಂಬೈನಲ್ಲಿ ರಸ್ತೆಗಳ ಸಂಖ್ಯೆ ಕಡಿಮೆಯಿದ್ದು, ವಾಹನಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. 2019-20ರ ಮಹಾರಾಷ್ಟ್ರ ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ ಮುಂಬೈನಲ್ಲಿ ಪ್ರತಿ ಕಿ.ಮೀಗೆ 1,900 ವಾಹನಗಳಿವೆ.

ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ಈ ಪ್ರಮಾಣವು ಪ್ರತಿ ಕಿ.ಮೀಗೆ 123 ವಾಹನಗಳಾಗಿದೆ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಮುಂಬೈನ ರಸ್ತೆಗಳ ಉದ್ದವು 2000 ಕಿ.ಮೀಗಳನ್ನು ಮೀರಿಲ್ಲ. ಇದರಿಂದಾಗಿ ವಾಹನ ಸಾಂದ್ರತೆಯು ಪ್ರತಿ ಕಿ.ಮೀ.ಗೆ 35%ನಷ್ಟು ಹೆಚ್ಚಾಗಿದೆ.

ಹಿಂದಿನ ಸಮೀಕ್ಷೆಯ ವರದಿಗಳ ಪ್ರಕಾರ, ಮುಂಬೈನ ವಾಹನ ಸಾಂದ್ರತೆಯು 2015-16ರಲ್ಲಿ ಪ್ರತಿ ಕಿ.ಮೀಗೆ 1,410 ಆಗಿತ್ತು. 2016-17ರಲ್ಲಿ ಪ್ರತಿ ಕಿ.ಮೀಗೆ 1,525, 2017-18ರಲ್ಲಿ ಪ್ರತಿ ಕಿ.ಮೀಗೆ 1,675 ಹಾಗೂ 2018-19ರಲ್ಲಿ ಪ್ರತಿ ಕಿ.ಮೀಗಳಿಗೆ 1,800ಗಳಾಗಿತ್ತು.

ಮುಂಬೈನ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯ ಪರಿಣಾಮವು ಸಾರ್ವಜನಿಕ ಸಾರಿಗೆ ಮೇಲಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಟ್ರಾಫಿಕ್ ಸಮಸ್ಯೆಯು ಪ್ರತಿದಿನ ಅಡ್ಡಿಪಡಿಸುತ್ತಿದೆ. ಒಂದು ಕಾಲದಲ್ಲಿ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಸಾರ್ವಜನಿಕ ಸಾರಿಗೆ ಈಗ ಹೆಚ್ಚಿನ ದಟ್ಟಣೆಯಿಂದಾಗಿ ಸರಿಯಾದ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

2020ರ ಜನವರಿ 1ರ ವೇಳೆಗೆ ಮುಂಬೈನಲ್ಲಿ 38 ಲಕ್ಷ ವಾಹನಗಳಿದ್ದವು ಎಂದು ವರದಿಯಲ್ಲಿ ಹೇಳಲಾಗಿದೆ. ದ್ವಿಚಕ್ರ ವಾಹನಗಳು ದಾಖಲೆ ಪ್ರಮಾಣದಲ್ಲಿ 7%ನಷ್ಟು ಬೆಳವಣಿಗೆಯನ್ನು ದಾಖಲಿಸಿವೆ.

ವರದಿಗಳ ಪ್ರಕಾರ ಮುಂಬೈನಲ್ಲಿ ಸುಮಾರು 23 ಲಕ್ಷಕ್ಕೂ ಹೆಚ್ಚು ನೋಂದಾಯಿತ ದ್ವಿಚಕ್ರ ವಾಹನಗಳಿವೆ. ಲಘು ಮೋಟಾರು ವಾಹನಗಳಾದ ಕಾರು, ಜೀಪ್ ಹಾಗೂ ಟ್ಯಾಕ್ಸಿಗಳ ಸಂಖ್ಯೆ ಸುಮಾರು 12 ಲಕ್ಷದಷ್ಟಿದೆ.

ಇಡೀ ಮಹಾರಾಷ್ಟ್ರದಲ್ಲಿ ಒಟ್ಟು 55 ಲಕ್ಷಕ್ಕೂ ಹೆಚ್ಚು ನೋಂದಾಯಿತ ವಾಹನಗಳಿವೆ. ರಾಜಧಾನಿ ದೆಹಲಿಯಲ್ಲಿ ಕಾರುಗಳ ಸಂಖ್ಯೆ ಮುಂಬೈಗಿಂತ ಮೂರು ಪಟ್ಟು ಹೆಚ್ಚಾಗಿದೆ. ಆದರೆ ಇಲ್ಲಿ ಪ್ರತಿ ಕಿ.ಮೀಗೆ ಕಾರುಗಳ ಸಾಂದ್ರತೆಯು 108 ಆಗಿದೆ.

ಇದು ಮುಂಬೈಗಿಂತ ಐದು ಪಟ್ಟು ಕಡಿಮೆಯಾಗಿದೆ. ಮುಂಬೈನಲ್ಲಿರುವ ರಸ್ತೆಗಳ ಉದ್ದವು ದೆಹಲಿಯ 7%ನಷ್ಟು ಮಾತ್ರ. ದೆಹಲಿಯಲ್ಲಿ 28,999 ಕಿ.ಮೀ ರಸ್ತೆಗಳಿದ್ದರೆ, ಮುಂಬೈನಲ್ಲಿ ಕೇವಲ 2000 ಕಿ.ಮೀನಷ್ಟು ರಸ್ತೆಗಳಿವೆ.


Click it and Unblock the Notifications