ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಸ್‌ಯುವಿ
ಭಾರತದಲ್ಲಿರುವ ಬಹುತೇಕ ಕಾರು ತಯಾರಕ ಕಂಪನಿಗಳು ಹೊಸದಾಗಿ ತಯಾರಿಸುತ್ತಿರುವ ಕಾರುಗಳಲ್ಲಿ ಸನ್‌ರೂಫ್ ಗಳನ್ನು ಅಳವಡಿಸಲಾಗುತ್ತಿದೆ. ಈ ಫೀಚರ್ ಅನ್ನು ಎಸ್ ಯುವಿಗಳಲ್ಲಿಯೂ ನೀಡಲಾಗುತ್ತಿದೆ.

ಕಾರು ತಯಾರಕ ಕಂಪನಿಗಳು ತಮ್ಮ ವಿವಿಧ ಸೆಗ್ ಮೆಂಟಿನ ಕಾರುಗಳಲ್ಲಿ ಸನ್‌ರೂಫ್ ಗಳನ್ನು ನೀಡುತ್ತಿವೆ. ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಹಾಗೂ ಜಪಾನ್ ಮೂಲದ ನಿಸ್ಸಾನ್ ಕಂಪನಿಗಳು ಸಹ ಈ ಫೀಚರ್ ಅನ್ನು ನೀಡುತ್ತಿವೆ.

ಆಟೊಕಾರ್ ವರದಿಗಳ ಪ್ರಕಾರ, ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಹೆಚ್‌ಬಿಎಕ್ಸ್ (ಕಿಗರ್ ಎಂದು ಕರೆಯಲ್ಪಡುವ) ಎಂಬ ಎಸ್ ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಎಸ್ ಯುವಿಯಲ್ಲಿ ಸನ್‌ರೂಫ್ ಅಳವಡಿಸಲಾಗುವುದು.

ನಿಸ್ಸಾನ್ ಇಎಂ 2 (ಮ್ಯಾಗ್ನೈಟ್) ಎಸ್ ಯುವಿಯನ್ನು ಸಹ ಬಿಡುಗಡೆಗೊಳಿಸಲಿದೆ. ಈ ಎಸ್ ಯುವಿಯಲ್ಲಿಯೂ ಸನ್‌ರೂಫ್ ಅಳವಡಿಸಲಾಗುವುದು. ಈ ಎರಡೂ ಎಸ್ ಯುವಿಗಳು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.

ಈ ಎರಡೂ ಎಸ್ ಯುವಿಗಳನ್ನು ಸನ್‌ರೂಫ್ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಸದ್ಯಕ್ಕೆ ಹೋಂಡಾದ ಡಬ್ಲ್ಯುಆರ್-ವಿ ಕಾರಿನಲ್ಲಿ ಸನ್‌ರೂಫ್ ಅಳವಡಿಸಿ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ನಿಸ್ಸಾನ್ ಹಾಗೂ ರೆನಾಲ್ಟ್ ಕಂಪನಿಯ ಯಾವುದೇ ಕಾರುಗಳು ಸನ್‌ರೂಫ್ ಗಳನ್ನು ಹೊಂದಿಲ್ಲ. ವರದಿಗಳ ಪ್ರಕಾರ, ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಎಸ್ ಯುವಿಗಳನ್ನು ಒಂದೇ ಸಿಎಂಎಫ್-ಎ + ಪ್ಲಾಟ್ ಫಾರಂನಲ್ಲಿ ತಯಾರಿಸಲಾಗುತ್ತದೆ.

ಈ ಎಸ್ ಯುವಿಗಳ ಫೀಚರ್ ಗಳ ಬಗ್ಗೆ ಹೇಳುವುದಾದರೆ, ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಗಳ ಸ್ಟೀಯರಿಂಗ್ ವ್ಹೀಲ್‌ನಲ್ಲಿಯೇ ಆಡಿಯೊ ಕಂಟ್ರೋಲರ್ ಗಳನ್ನು ನೀಡಲಾಗುವುದು. ಇದರ ಜೊತೆಗೆ ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ನೀಡಲಾಗುವುದು. ಟ್ರೈಬರ್ ಕಾರು ಈ ಫೀಚರ್ ಗಳನ್ನು ಹೊಂದಿಲ್ಲ.

ಈ ಎರಡೂ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ. ಈ ಎರಡೂ ಎಸ್ ಯುವಿಗಳಲ್ಲಿ 1.0-ಲೀಟರ್, ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 94 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಈ ಎಂಜಿನ್‌ನೊಂದಿಗೆ, ಕಂಪನಿಯು 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಆಯ್ಕೆಯನ್ನು ನೀಡಲಾಗುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಎಸ್ ಯುವಿಯನ್ನು ಮೇ ತಿಂಗಳಿನಲ್ಲಿ ಹಾಗೂ ರೆನಾಲ್ಟ್ ಕಿಗರ್ ಅನ್ನು ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.


Click it and Unblock the Notifications