ಎರ್ಟಿಗಾ ರೀಬ್ಯಾಡ್ಜ್ ವರ್ಷನ್ ಬಿಡುಗಡೆಯ ಮಾಹಿತಿ ಬಿಟ್ಟುಕೊಟ್ಟ ಟೊಯೊಟಾ
ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಈಗಾಗಲೇ ರೀಬ್ಯಾಡ್ಜ್ ಗ್ಲಾಂಝಾ ಕಾರಿನ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಗ್ಲಾಂಝಾ ನಂತರ ಮತ್ತಷ್ಟು ಜನಪ್ರಿಯ ಕಾರುಗಳ ರೀಬ್ಯಾಡ್ಜ್ ಆವೃತ್ತಿಗಳ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ.

2017ರಲ್ಲೇ ಸಹಭಾಗಿತ್ವದ ಯೋಜನೆ ಅಡಿ ರೀಬ್ಯಾಡ್ಜ್ ಕಾರುಗಳ ಮಾರಾಟಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿರುವ ಮಾರುತಿ ಸುಜಕಿ ಮತ್ತು ಟೊಯೊಟಾ ಸಂಸ್ಥೆಗಳು ಕಳೆದ ವರ್ಷ ಬಲೆನೊ ಕಾರನ್ನು ಗ್ಲಾಂಝಾ ಹೆಸರಿನಲ್ಲಿ ಬಿಡುಗಡೆ ಮಾಡಿದ್ದವು. ಇದೀಗ ಮತ್ತೆರಡು ಜನಪ್ರಿಯ ಕಾರು ಮಾದರಿಗಳಾದ ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳನ್ನು ಸಹ ಟೊಯೊಟಾ ಬ್ಯಾಡ್ಜ್‌ನೊಂದಿಗೆ ಬಿಡುಗಡೆಗಾಗಿ ಸಿದ್ದಪಡಿಸಲಾಗುತ್ತಿದ್ದು, ಮೊದಲು ವಿಟಾರಾ ಬ್ರೆಝಾ, ತದನಂತರವಷ್ಟೇ ಎರ್ಟಿಗಾ ಕಾರು ರೀಬ್ಯಾಡ್ಜ್ ಪಡೆದುಕೊಳ್ಳಲಿದೆ.

ಮಾಹಿತಿಗಳ ಪ್ರಕಾರ, ರೀಬ್ಯಾಡ್ಜ್ ಹೊಂದಿರುವ ವಿಟಾರಾ ಬ್ರೆಝಾ ಕಾರು ಇದೇ ವರ್ಷ ಜೂನ್ ವೇಳೆಗೆ ಬಿಡುಗಡೆಯಾಗಲಿದ್ದರೆ, ಎರ್ಟಿಗಾ ರೀಬ್ಯಾಡ್ಜ್ ಆವೃತ್ತಿಯನ್ನು ಅಕ್ಟೋಬರ್ ಅಥವಾ ನವೆಂಬರ್ ಅವಧಿಯಲ್ಲಿ ಬಿಡುಗಡೆ ಮಾಡುವುದಾಗಿ ಟೊಯೊಟಾ ಸಂಸ್ಥೆಯೇ ಹೇಳಿಕೊಂಡಿದೆ.

ರೀಬ್ಯಾಡ್ಜ್ ಹೊಂದಲಿರುವ ಕಾರುಗಳು ಮೂಲ ಕಾರಿಗಿಂತಲೂ ತುಸು ವಿಭಿನ್ನವಾದ ತಾಂತ್ರಿಕ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆಯಲ್ಲೂ ಕೂಡಾ ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ರೀಬ್ಯಾಡ್ಜ್ ಆವೃತ್ತಿಗಳಿಂದ ಮಾರಾಟ ವ್ಯಾಪ್ತಿ ಹೆಚ್ಚಳವಾಗುವುದರ ಜೊತೆಗೆ ಗ್ರಾಹಕರ ಸೆಳೆಯಲು ಸುಲಭವಾಗುತ್ತದೆ.

ಈ ಮೂಲಕ ಒಂದೇ ಕಾರಿನ ಮೂಲಕ ಎರಡು ಸಂಸ್ಥೆಗಳಿಗೂ ಆದಾಯ ಹರಿದುಬರಲಿದ್ದು, ಗ್ರಾಹಕರಿಗೆ ತಮ್ಮ ಇಷ್ಟದ ಬ್ರಾಂಡ್ ಅಡಿ ಒಂದೇ ಮಾದರಿಯ ಕಾರನ್ನು ಖರೀದಿಸಲು ಇದು ಸಹಕಾರಿಯಾಗಿದೆ. ಇದಲ್ಲದೇ ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಅನುಸಾರವಾಗಿ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿರುವ ಟೊಯೊಟಾ ಸಂಸ್ಥೆಯು ಇಟಿಯಾಸ್ ಸೆಡಾನ್, ಇಟಿಯಾಸ್ ಲಿವಾ ಮತ್ತು ಇಟಿಯಾಸ್ ಕ್ರಾಸ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹೊಸ ನಿರ್ಧಾರದಿಂದಾಗಿ ರೂ.10 ಲಕ್ಷ ಬೆಲೆಯೊಳಗಿನ ಕಾರುಗಳ ಮಾರಾಟದಿಂದಲೇ ದೂರ ಉಳಿಯುತ್ತಿರುವ ಟೊಯೊಟಾ ಸಂಸ್ಥೆಯು ಪ್ರೀಮಿಯಂ ಕಾರುಗಳನ್ನು ಹೊರತುಪಡಿಸಿ ಅಗ್ಗದ ಬೆಲೆಯ ಕಾರುಗಳ ಮಾರಾಟದಲ್ಲಿ ತನ್ನ ಹೆಸರನ್ನು ಉಳಿಸಿಕೊಳ್ಳಲು ರೀಬ್ಯಾಡ್ಜ್ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ವಹಿಸಿದೆ.

ರೀಬ್ಯಾಡ್ಜ್ ಹೊಂದಿರುವ ಗ್ಲಾಂಝಾ ಕಾರು ನಿಗದಿತ ಮಟ್ಟಕ್ಕೆ ಮಾರಾಟವಾಗಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ರೀಬ್ಯಾಡ್ಜ್ ಕಾರುಗಳನ್ನು ಹೊಸ ಬದಲಾವಣೆಯೊಂದಿಗೆ ಸೆಳೆಯುವ ಬಗ್ಗೆ ಟೊಯೊಟಾ ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ ರೀಬ್ಯಾಡ್ಜ್ ಯೋಜನೆಯು ಎರಡು ಸಂಸ್ಥೆಗಳಿಗೂ ಪೂರಕವಾದ ಮಾರುಕಟ್ಟೆಯನ್ನು ಒದಗಿಸಲಿದ್ದು, ಮಾರುತಿ ಸುಜುಕಿ ಸಂಸ್ಥೆಗೆ ಉತ್ಪಾದನೆ ಹೆಚ್ಚಳವಾದಲ್ಲಿ ಮಾರಾಟ ವ್ಯಾಪ್ತಿ ವಿಸ್ತರಿಸಿರುವ ಟೊಯೊಟಾ ಸಂಸ್ಥೆಗೆ ರೀಬ್ಯಾಡ್ಜ್ ಕಾರು ಮಾರಾಟ ಮೂಲಕ ಇಂತಿಷ್ಟು ಪ್ರಮಾಣದ ಆದಾಯ ಹರಿದುಬರುತ್ತದೆ.

ಜೊತೆಗೆ ಸ್ಥಗಿತಗೊಳ್ಳಲಿರುವ ಇಟಿಯಾಸ್ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅನ್ನು ಬಳಕೆ ಮಾಡಿಕೊಳ್ಳಲಿರುವ ಮಾರುತಿ ಸುಜುಕಿಯು ದಕ್ಷಿಣ ಭಾರತದಲ್ಲಿನ ಬೇಡಿಕೆಯನ್ನು ನಿಗದಿತ ಅವಧಿಯೊಳಗೆ ಪೂರೈಸಲಿದ್ದು, ಬಿಡದಿ ಕಾರು ಉತ್ಪಾದನಾ ಘಟಕದಲ್ಲೇ ರೀಬ್ಯಾಡ್ಜ್ ಆವೃತ್ತಿಗಳು ಉತ್ಪಾದನೆಗೊಳ್ಳಲಿವೆ.


Click it and Unblock the Notifications








