ಕರೋನಾ ವೈರಸ್ ಹಿನ್ನೆಲೆ: ವಾರಂಟಿ ಅವಧಿ ವಿಸ್ತರಿಸಿದ ಟಾಟಾ ಮೋಟಾರ್ಸ್
ಕರೋನಾ ವೈರಸ್‌ನಿಂದಾಗಿ ಇಡಿ ವಿಶ್ವವೇ ಆತಂಕದಲ್ಲಿದ್ದು, ಈ ಮಾರಣಾಂತಿಕ ವೈರಸ್ ಹರಡದಂತೆ ತಡೆಯಲು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾಮಾರಿ ಕರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಆಟೋ ಉದ್ಯಮವು ಕೂಡಾ ಸಂಕಷ್ಟವನ್ನು ಅನುಭವಿಸುತ್ತಿದೆ. ಕರೋನಾದಿಂದಾಗಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿರುವ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ಗ್ರಾಹಕ ಸ್ನೇಹಿಯಾಗಿರುವ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಟಾಟಾ ಮೋಟಾರ್ಸ್ ಕೂಡ ಈ ಪಟ್ಟಿಗೆ ಸೇರಿಕೊಂಡಿದೆ.

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ನೀಡುತ್ತಿರುವ ವಾರಂಟಿ ಹಾಗೂ ಫ್ರೀ ಸರ್ವಿಸ್ ಅವಧಿಯನ್ನು 31ರ ಜುಲೈವರೆಗೆ ವಿಸ್ತರಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಟೀಂ ಬಿಹೆಚ್‌ಪಿ ಬಹಿರಂಗಪಡಿಸಿದೆ.

ಈ ಮಾಹಿತಿಯ ಪ್ರಕಾರ, ಮಾರ್ಚ್ 15ರಿಂದ ಮೇ 31ರವರೆಗೆ ವಾರಂಟಿ ಹಾಗೂ ಫ್ರೀ ಸರ್ವಿಸ್ ಹೊಂದಿರುವ ಟಾಟಾ ಮೋಟಾರ್ಸ್‌ನ ವಾಹನಗಳ ವಾರಂಟಿ ಹಾಗೂ ಫ್ರೀ ಸರ್ವಿಸ್ ಅವಧಿಯನ್ನು2020ರ ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್‌ನಿಂದಾಗಿ ಟಾಟಾ ಮೋಟಾರ್ಸ್ ತನ್ನ ಉತ್ಪಾದನಾ ಘಟಕಗಳಲ್ಲಿನ ಉತ್ಪಾದನೆಯನ್ನು ನಿಲ್ಲಿಸಿದೆ. ಟಾಟಾ ಮೋಟಾರ್ಸ್ ಮಾತ್ರವಲ್ಲದೆ ಇತರ ಕಾರು ತಯಾರಕ ಕಂಪನಿಗಳೂ ಸಹ ಉತ್ಪಾದನೆಯನ್ನು ನಿಲ್ಲಿಸಿವೆ.

ಟಾಟಾ ಮೋಟಾರ್ಸ್ ಗಿಂತ ಮೊದಲು ಹ್ಯುಂಡೈ ಕಂಪನಿಯೂ ಸಹ ಇದೇ ಹಾದಿಯನ್ನು ತುಳಿದಿತ್ತು. ಹ್ಯುಂಡೈ ಕಂಪನಿಯೂ ಸಹ ತನ್ನ ಗ್ರಾಹಕರಿಗಾಗಿ ವಾರಂಟಿ ಹಾಗೂ ಫ್ರೀ ಸರ್ವಿಸ್ ಅವಧಿಯನ್ನು ವಿಸ್ತರಿಸಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕರೋನಾ ವೈರಸ್ ಹಾವಳಿಯಿಂದಾಗಿ ದೇಶಾದ್ಯಂತ ಡೀಲರ್ ಗಳ ಬಳಿಯಿರುವ ಬಿಎಸ್ 4 ವಾಹನಗಳು ಮಾರಾಟವಾಗದೇ ಉಳಿದಿವೆ. ಭಾರತದಲ್ಲಿ ಇನ್ನೂ 7 ಲಕ್ಷ ಕೋಟಿ ಬಿಎಸ್ 4 ವಾಹನಗಳು ಮಾರಾಟವಾಗದೇ ಉಳಿದಿವೆ ಎಂದು ಅಂದಾಜಿಸಲಾಗಿದೆ.

ಕರೋನಾ ವೈರಸ್‌ನಿಂದಾಗಿ ದೇಶದ ಹಲವು ನಗರಗಳು ತತ್ತರಿಸಿದ್ದು, ಈ ವೈರಸ್ ಸೋಂಕು ಹರಡದಂತೆ ತಡೆಯಲು ಡ್ರೋನ್‌ಗಳ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುತ್ತಿದೆ. ಇದನ್ನು ದೇಶದ ಹಲವು ನಗರಗಳಲ್ಲಿ ಬಳಸಲಾಗುತ್ತಿದೆ.


Click it and Unblock the Notifications