ಸನ್‌ರೂಫ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ ನೆಕ್ಸಾನ್ ಫೇಸ್‌ಲಿಫ್ಟ್
ಬಿಎಸ್-6 ಕಾರು ಮಾದರಿಗಳ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಟಾಟಾ ಸಂಸ್ಥೆಯು ಶೀಘ್ರದಲ್ಲೇ ನೆಕ್ಸಾನ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲಿದ್ದು, ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಟಾಟಾ ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸ ಕಾರು ಮಾದರಿಗಳಾದ ಆಲ್‌ಟ್ರೊಜ್, ನೆಕ್ಸಾನ್ ಎಲೆಕ್ಟ್ರಿಕ್, ಗ್ರಾವಿಟಾಸ್ ಜೊತೆಗೆ ಬಿಎಸ್-6 ಕಾರುಗಳಾದ ನೆಕ್ಸಾನ್, ಹ್ಯಾರಿಯರ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳಿಂತಲೂ ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗೊಳಿಸಲು ಸಜ್ಜಾಗುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಮತ್ತು ಫೇಸ್‌ಲಿಫ್ಟ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲಿವೆ.

ಬಿಡುಗಡೆಗಾಗಿ ಹೊಸ ಕಾರುಗಳು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯವನ್ನ ಉನ್ನತೀಕರಿಸಲಾಗಿದೆ.

ಟಾಟಾ ಸಂಸ್ಥೆಯು ಮುಂದಿನ ತಿಂಗಳು ಫೆಬ್ರುವರಿ ಅಂತ್ಯದವರೆಗೂ ಬಿಎಸ್-4 ಕಾರುಗಳನ್ನು ಮಾರಾಟವನ್ನು ಮುಂದುವರಿಸಲಿದ್ದು, ತದನಂತರವಷ್ಟೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿ ಹೊಂದಿರುವ ಹ್ಯಾರಿಯರ್, ನೆಕ್ಸಾನ್, ಹೆಕ್ಸಾ, ಟಿಗೋರ್ ಮತ್ತು ಟಿಯಾಗೋ ಕಾರುಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ. ಅದಕ್ಕೂ ಮುನ್ನ ಆಲ್‌ಟ್ರೊಜ್ ಕಾರನ್ನು ಇದೇ ತಿಂಗಳು 23ಕ್ಕೆ ಬಿಡುಗಡೆಗೊಳಿಸುತ್ತಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಗ್ರಾವಿಟಾಸ್ ಪ್ರದರ್ಶನಗೊಳಿಸಿ ಮೇ ಅಥವಾ ಜೂನ್ ಅವಧಿಯಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

ಹೀಗಾಗಿ ಮೊದಲ ಹಂತವಾಗಿ ಆಲ್‌ಟ್ರೋಜ್ ಕಾರು ಬಿಡುಗಡೆಯಾಗಲಿದ್ದರೆ ಫೆಬ್ರುವರಿ ಅಥವಾ ಮಾರ್ಚ್ ಅಂತ್ಯಕ್ಕೆ ಬಿಎಸ್-6 ಕಾರುಗಳು ಮತ್ತು ತದನಂತರವಷ್ಟೇ ಜೂನ್ ಆರಂಭದಲ್ಲಿ 7 ಸೀಟರ್ ಗ್ರಾವಿಟಾಸ್ ಎಸ್‌ಯುವಿ ಕಾರು ಖರೀದಿಗೆ ಲಭ್ಯವಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಕಾರು ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಉನ್ನತೀಕರಿಸಲಾಗಿದೆ.

ಅದರ ಹೊರತಾಗಿ ಹೊಸ ನೆಕ್ಸಾನ್ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬ್ಯಾನೆಟ್, ಬಂಪರ್ ಡಿಸೈನ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ತಂತ್ರಜ್ಞಾನ ಪ್ರೇರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಸನ್‌ರೂಫ್, ಹೈ ಎಂಡ್ ಮಾದರಿಯಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಕ್ಯಾಬಿನ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.

ಇನ್ನು ಟಾಟಾ ಸಂಸ್ಥೆಯು ನೆಕ್ಸಾನ್ ಫೇಸ್‌ಲಿಫ್ಟ್ ಜೊತೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಸಹ ಬಿಡುಗಡೆಗಾಗಿ ಸಿದ್ದಪಡಿಸಿದ್ದು, ಇದೇ ತಿಂಗಳು 28ಕ್ಕೆ ಬಿಡುಗಡೆಯಾಗಲಿರುವ ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ ಗರಿಷ್ಠ 320ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.

ಮಾಹಿತಿಗಳ ಪ್ರಕಾರ, ನೆಕ್ಸಾನ್ ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.


Click it and Unblock the Notifications








