ಶೀಘ್ರದಲ್ಲೇ ಗ್ರಾಹಕರ ಕೈ ಸೇರಲಿವೆ ಟಾಟಾ ಬಿಎಸ್-6 ನೆಕ್ಸಾನ್ ಮತ್ತು ಹ್ಯಾರಿಯರ್ ಡೀಸೆಲ್ ವರ್ಷನ್
ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಹೊಸ ಎಮಿಷನ್ ನಿಯಮ ಅನುಗುಣವಾಗಿ ಬಿಎಸ್-6 ವಾಹನಗಳ ಮಾರಾಟಕ್ಕೆ ಚಾಲನೆ ನೀಡಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಮಾಲಿನ್ಯ ತಗ್ಗಿಸುವತ್ತ ಮಹತ್ವದ ಹೆಜ್ಜೆಯಿರಿಸುತ್ತಿದ್ದು, ಟಾಟಾ ಕೂಡಾ ತನ್ನ ಜನಪ್ರಿಯ ಕಾರುಗಳನ್ನು ಹೊಸ ನಿಯಮ ಅನುಸಾರವಾಗಿ ಬಿಡುಗಡೆ ಮಾಡಿದೆ.

ಕಳೆದ ತಿಂಗಳು ಜನವರಿ ಅಂತ್ಯದಲ್ಲಿ ಬಿಡುಗಡೆ ಮಾಡಲಾಗಿದ್ದ ಬಿಎಸ್-6 ಟಿಗೋರ್, ಟಿಯಾಗೋ, ನೆಕ್ಸಾನ್ ಕಾರುಗಳ ಪೆಟ್ರೋಲ್ ಆವೃತ್ತಿಗಳ ವಿತರಣೆಗೆ ಚಾಲನೆ ನೀಡಲಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಬಿಎಸ್-6 ಹ್ಯಾರಿಯರ್ ಮತ್ತು ನೆಕ್ಸಾನ್ ಫೇಸ್‌ಲಿಫ್ಟ್ ಕಾರುಗಳ ಡೀಸೆಲ್ ಮಾದರಿಗಳ ವಿತರಣೆಯು ಮಾರ್ಚ್ ಮಧ್ಯಂತರದಲ್ಲಿ ಶುರುವಾಗಲಿಯೆಂತೆ. ಸದ್ಯಕ್ಕೆ ಬಿಎಸ್-4 ಕಾರುಗಳ ಸ್ಟಾಕ್ ಕ್ಲಿಯೆರಿನ್ಸ್‌ಗಾಗಿ ಹೆಚ್ಚು ಗಮನಹರಿಸಿರುವ ಟಾಟಾ ಸಂಸ್ಥೆಯು ಬಿಎಸ್-6 ಜಾರಿಗೆ ಕೆಲವೇ ದಿನಗಳು ಬಾಕಿಯಿರುವಂತೆ ಹೊಸ ಕಾರುಗಳ ಮಾರಾಟವನ್ನು ಅಧಿಕೃತವಾಗಿ ಶುರು ಮಾಡಲಿದೆ.

ಬಿಎಸ್-6 ಕಾರುಗಳ ಮಾದರಿಗಳ ಖರೀದಿಗಾಗಿ ಈಗಾಗಲೇ ಅಧಿಕೃತವಾಗಿ ಬುಕ್ಕಿಂಗ್ ಸ್ವಿಕರಿಸಲಾಗುತ್ತಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ರೂ. 21 ಸಾವಿರದಿಂದ ರೂ. 50 ಸಾವಿರ ಮುಂಗಡ ಹಣದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

ಹ್ಯಾರಿಯರ್ ಎಸ್‌ಯುವಿ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಹೆಚ್ಚುವರಿ ಬಣ್ಣಗಳ ಆಯ್ಕೆ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಜೊತೆಗೆ ಹೊಸ ಕಾರು ದುಬಾರಿ ಬೆಲೆ ಹೊಂದಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು 20.25 ಲಕ್ಷ ಬೆಲೆ ಪಡೆದುಕೊಂಡಿದೆ. ಹೊಸ ಎಮಿಷನ್ ನಿಯಮದಿಂದಾಗಿ ಸಣ್ಣ ಗಾತ್ರದ ಡೀಸೆಲ್ ಎಂಜಿನ್ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಪೆಟ್ರೋಲ್ ಕಾರುಗಳ ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಸದ್ಯ ಹ್ಯಾರಿಯರ್‌ನಲ್ಲೂ ಡಿಸೇಲ್ ಮ್ಯಾನುವಲ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಹುಬೇಡಿಕೆಯ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆಗೆ ಮಾಡಿರುವುದು ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್‌ಗಿಂತಲೂ ದೊಡ್ಡದಾದ ಸ್ಕ್ರೀನ್ ನೀಡಿದ್ದು, ಸುಧಾರಿತ ಮಾದರಿಯ ಡ್ಯಾಶ್‌ಬೋರ್ಡ್, ಆಟೋಮ್ಯಾಟಿಕ್ ಸನ್‌ರೂಫ್, ಸಾಫ್ಟ್ ಟಚ್ ಮೆಟಿರಿಯಲ್‌ಗಳು ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯು ಎಸ್‌ಯುವಿ ಪ್ರಿಯರ ಗಮನಸೆಳೆಯಲಿವೆ.

ಹಾಗೆಯೇ ವಿನೂತನ ಡಿಸೈನ್‌ನೊಂದಿಗೆ ಬಿಡುಗಡೆಯಾಗಿರುವ ನೆಕ್ಸಾನ್ ಕೂಡಾ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಹೊಸ ಕಾರಿನ ಪೆಟ್ರೋಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.95 ಲಕ್ಷಗಳಾದರೆ, ಡೀಸೆಲ್ ಎಂಜಿನ್ ಮಾದರಿಯು ರೂ.8.45 ಲಕ್ಷ ಬೆಲೆ ಹೊಂದಿದೆ.

ಫೇಸ್ಲಿಫ್ಟ್ ಕಾರಿನಲ್ಲಿರುವ ಮುಂಭಾಗದಲ್ಲಿರುವ ಬಂಪರ್, ಬಾನೆಟ್ ಡಿಸೈನ್ ಹಾಗೂ ಹೆಡ್‍ಲ್ಯಾಂಪ್ ಕ್ಲಸ್ಟರ್‍ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ನೆಕ್ಸಾನ್ ಕಾರು ಹೊಸ ವಿನ್ಯಾಸದ ಡಿಆರ್‍ಎಲ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್‍ಗಳನ್ನು ಹೊಂದಿದೆ. ಈ ಫೀಚರ್‍ಗಳನ್ನು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿಯೂ ಸಹ ನೀಡಲಾಗಿದೆ.

ಈ ಕಾರಿನ ಕ್ಯಾಬಿನ್‍ನಲ್ಲಿ ಹಲವಾರು ಅಪ್‍ಡೇಟ್‍ಗಳನ್ನು ಮಾಡಲಾಗಿದೆ. ಸಾಂಪ್ರಾದಾಯಿಕ ಮಾದರಿಯ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬದಲಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಈಗ ಟಿಯಾಗೋದಲ್ಲಿರುವಂತಹ ಡಿಜಿಟಲ್ ಯುನಿಟ್ ಅಳವಡಿಸಲಾಗಿದೆ.


Click it and Unblock the Notifications