ಭಾರತದಲ್ಲಿ ಟೆಸ್ಲಾ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಹಿತಿ ಬಹಿರಂಗ
ಮಾಲಿನ್ಯ ತಡೆಗಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಅಮೆರಿಕದ ದೈತ್ಯ ಆಟೋ ಉತ್ಪಾದನಾ ಕಂಪನಿಯಾದ ಟೆಸ್ಲಾ ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಮಾರಾಟ ಜಾಲವನ್ನು ವಿಸ್ತರಣೆ ಮಾಡಲು ಮುಂದಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಹೊಸ ಕಾರುಗಳನ್ನು ಪರಿಚಯಿಸಲು ಉತ್ಸುಕವಾಗಿದೆ.

ಮಾಲಿನ್ಯವನ್ನು ತಗ್ಗಿಸಲು ಮತ್ತು ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ಉತ್ತೇಜಿಸಲು ವಿಶ್ವದ ಬಹುತೇಕ ರಾಷ್ಟ್ರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಭಾರತ ಸರ್ಕಾರ ಕೂಡಾ ಈ ನಿಟ್ಟಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಮಟ್ಟದ ಸಬ್ಸಡಿ, ಜಿಎಸ್‌ಟಿ ಇಳಿಕೆ ಮತ್ತು ತೆರಿಗೆ ವಿನಾಯ್ತಿಗಳನ್ನು ಘೋಷಣೆ ಮಾಡಿರುವುದು ಭಾರೀ ಬದಲಾವಣೆ ಕಾರಣವಾಗಿದೆ.

ಹೀಗಾಗಿ ಭಾರತದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಇವಿ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಜಾಗತಿಕ ಮನ್ನಣೆ ಪಡೆದಿರುವ ಟೆಸ್ಲಾ ಕೂಡಾ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿದೆ. 2021ರ ಜನವರಿಯಲ್ಲಿ ಬುಕ್ಕಿಂಗ್ ಆರಂಭಿಸಲಿರುವ ಟೆಸ್ಲಾ ಕಂಪನಿಯು ಜೂನ್ ಆರಂಭದಲ್ಲಿ ಕಾರು ವಿತರಣೆಗೆ ಚಾಲನೆ ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಮಾಡೆಲ್ 3 ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಟೆಸ್ಲಾ ಕಂಪನಿಯು ಆರಂಭಿಕ ಹಂತವಾಗಿ ದೇಶದಲ್ಲಿ ನೇರ ಮಾರಾಟ ಪ್ರಕ್ರಿಯೆ ಆರಂಭಿಸಲಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತ ಡೀಲರ್ಸ್‌ಗಳಿಗೆ ಚಾಲನೆ ನೀಡಲಿದೆ.

ಕಳೆದ 2017ರಲ್ಲೇ ಟೆಸ್ಲಾ ಮೊದಲ ಇವಿ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಮಾಡೆಲ್ 3 ಕಾರು ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯ ಇವಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಿಗೆ ಟೆಸ್ಲಾ ಕಂಪನಿಯು ಹೊಸ ಇವಿ ಕಾರು ಮಾದರಿಯನ್ನು ಅಮೆರಿಕದಿಂದಲೇ ರಫ್ತುಗೊಳಿಸುತ್ತಿದೆ.

ಅತ್ಯುತ್ತಮ ದರ್ಜೆಯ ಬ್ಯಾಟರಿ ಸೌಲಭ್ಯ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದಿಂದಾಗಿ ಟೆಸ್ಲಾ ಇವಿ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದ್ದಲ್ಲದೇ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿವೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಲಿದೆ. ಸಂಪೂರ್ಣವಾಗಿ ಆಮದು ಕಾರು ಮಾದರಿಯಾಗಿರುವುದರಿಂದ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು ಮುಂಬರುವ 2022ರ ವೇಳೆಗೆ ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರ ತೆರೆಯುವ ಯೋಜನೆಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಂಶೋಧನಾ ಕೇಂದ್ರವನ್ನು ನಮ್ಮ ಬೆಂಗಳೂರಿನಲ್ಲಿ ಮತ್ತು ಉತ್ಪಾದನಾ ಘಟಕವನ್ನು ಪುಣೆಯಲ್ಲಿ ತೆರೆಯುವ ಸಿದ್ದತೆ ನಡೆಸಲಾಗುತ್ತಿದ್ದು, ಬಹುದಿನಗಳ ನಂತರ ಟೆಸ್ಲಾ ಕಂಪನಿಯು ಇದೀಗ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡುತ್ತಿರುವುದು ಟೆಸ್ಲಾ ಪ್ರಿಯರಿಗೆ ಖುಷಿ ವಿಚಾರ ಎಂದು ಹೇಳಬಹುದು.


Click it and Unblock the Notifications








