2021ಕ್ಕೆ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಬಹುತೇಕ ಖಚಿತ
ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಅಮೆರಿಕದ ದೈತ್ಯ ಆಟೋ ಉತ್ಪಾದನಾ ಕಂಪನಿಯಾದ ಟೆಸ್ಲಾ ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಮಾರಾಟ ಜಾಲವನ್ನು ವಿಸ್ತರಣೆ ಮಾಡಲು ಮುಂದಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಹೊಸ ಕಾರುಗಳನ್ನು ಪರಿಚಯಿಸಲು ಉತ್ಸುಕವಾಗಿದೆ.

ಮಾಲಿನ್ಯವನ್ನು ತಗ್ಗಿಸಲು ಮತ್ತು ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ಉತ್ತೇಜಿಸಲು ವಿಶ್ವದ ಬಹುತೇಕ ರಾಷ್ಟ್ರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಭಾರತ ಸರ್ಕಾರ ಕೂಡಾ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಮಟ್ಟದ ಸಬ್ಸಡಿ, ಜಿಎಸ್‌ಟಿ ಇಳಿಕೆ ಮತ್ತು ತೆರಿಗೆ ವಿನಾಯ್ತಿಗಳನ್ನು ಘೋಷಣೆ ಮಾಡಿರುವುದು ಭಾರೀ ಬದಲಾವಣೆ ಕಾರಣವಾಗಿದೆ.

ಹೀಗಾಗಿ ಭಾರತದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಇವಿ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಜಾಗತಿಕ ಮನ್ನಣೆ ಪಡೆದಿರುವ ಟೆಸ್ಲಾ ಕೂಡಾ ಭಾರತದತ್ತ ಮುಖಮಾಡಿದೆ.

2015ರಿಂದಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಹೊಸ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಟೆಸ್ಲಾ ಸಂಸ್ಥೆಯು ಕಳೆದ 2017ರಲ್ಲಿ ತನ್ನ ಮೊದಲ ಇವಿ ಕಾರು ಮಾದರಿಯಾದ ಮಾಡೆಲ್ 3 ಮತ್ತು ಮಾಡೆಲ್ ಎಕ್ಸ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗಿರುವ ಟೆಸ್ಲಾ ಹೊಸ ಎಲೆಕ್ಟ್ರಿಕ್ ಕಾರುಗಳು ಹಲವಾರು ಐಷಾರಾಮಿ ಕಾರುಗಳ ಮಾರಾಟವನ್ನು ಹಿಂದಿಕ್ಕಿದೆ.

ಅತ್ಯುತ್ತಮ ದರ್ಜೆಯ ಬ್ಯಾಟರಿ ಸೌಲಭ್ಯ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದಿಂದಾಗಿ ಹೊಸ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದ್ದಲ್ಲದೇ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಕೇವಲ ಅಮೆರಿಕದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ಅತಿ ಹೆಚ್ಚು ರಫ್ತುಗೊಳ್ಳುವ ಎಲೆಕ್ಟ್ರಿಕ್ ಕಾರು ಮಾದರಿಯಾಗಿರುವ ಟೆಸ್ಲಾ ಮಾಡೆಲ್ 3 ಮತ್ತು ಮಾಡೆಲ್ ಎಕ್ಸ್ ಕಾರುಗಳು ಪ್ರತಿ ಚಾರ್ಜ್‌ಗೆ 300 ಕಿ.ಮಿ ನಿಂದ 480 ಕಿ.ಮಿ ಮೈಲೇಜ್ ರೇಂಜ್ ಪಡೆದುಕೊಂಡಿವೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲೂ ಎಲೆಕ್ಟ್ರಿಕ್ ಕಾರು ಪ್ರಿಯರು ಟೆಸ್ಲಾ ಕಾರುಗಳನ್ನು ದುಬಾರಿ ಬೆಲೆಯೊಂದಿಗೆ ಆಮದು ಮಾಡಿಕೊಳ್ಳುತ್ತಿದ್ದು, ಇದೀಗ ಟೆಸ್ಲಾ ಕಂಪನಿಯೇ ಭಾರತದಲ್ಲಿ ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಆರಂಭಿಸುವ ಸಿದ್ದತೆಯಲ್ಲಿದೆ.

ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಕುರಿತಂತೆ ಟೆಸ್ಲಾ ಕ್ಲಬ್ ಇಂಡಿಯಾ ಪೇಜ್ ಪ್ರಶ್ನೆಗಳಿಗೆ ಪ್ರಕ್ರಿಯೆಸಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 2021ಕ್ಕೆ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಭಾರತದಲ್ಲಿ ಟೆಸ್ಲಾ ಹೊಸ ಇವಿ ಕಾರುಗಳಿರುವ ಗ್ರಾಹಕರ ಆಸಕ್ತಿ ಬಗೆಗೆ ಟೆಸ್ಲಾ ಕಂಪನಿಯು ಧನ್ಯವಾದ ಸಲ್ಲಿಸಿದೆ.

ಇದಕ್ಕೆ ಪೂರಕ ಎಂಬಂತೆ ಟೆಸ್ಲಾ ಕಂಪನಿಯು ನಮ್ಮ ಬೆಂಗಳೂರಿಲ್ಲಿ ರಿಸರ್ಚ್ ಸೆಂಟರ್ ಆರಂಭಿಸಲು ಕರ್ನಾಟಕ ಸರ್ಕಾರದೊಂದಿಗೆ ಜೊತೆ ಚರ್ಚೆ ನಡೆಸಿದ್ದು, ಮಾತುಕತೆ ಯಶಸ್ವಿಯಾದಲ್ಲಿ ಟೆಸ್ಲಾ ಕಂಪನಿಯ ಎರಡನೇ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರವು ಭಾರತದ ಪಾಲಾಗಲಿದೆ.

ಬೆಂಗಳೂರಿನಲ್ಲಿ ಈಗಾಗಲೇ ಜಾಗತಿಕ ಕಂಪನಿಗಳಾದ ಡೈಮ್ಲರ್, ಬಾಷ್ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಗಳ ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಹಲವು ಇವಿ ಸ್ಟಾರ್ಟ್ ಕಂಪನಿಗಳು ಬೆಂಗಳೂರಿನಲ್ಲಿಯೇ ನೆಲೆಯೂರಿವೆ. ಹೀಗಾಗಿ ಟೆಸ್ಲಾ ಕೂಡಾ ತನ್ನ ರಿಸರ್ಚ್ ಸೆಂಟರ್ ಅನ್ನು ಬೆಂಗಳೂರಿನಲ್ಲಿಯೇ ತೆರೆಯುವ ಯೋಜನೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಟೆಸ್ಲಾ ಕಂಪನಿಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ.


Click it and Unblock the Notifications








