ಬದಲಾಗಲಿದೆ ವಿಮಾ ಯೋಜನೆ: ಚಲಿಸಿದಷ್ಟು ದೂರಕ್ಕೆ ಮಾತ್ರ ಪ್ರೀಮಿಯಂ ಪಾವತಿಸಿ..!
ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪನಿಯು ಬುಧವಾರ ಆನ್‌ಲೈನ್ ವಿಮಾ ಸೇವಾ ಕಂಪನಿಯಾದ ಪಾಲಿಸಿಬಜಾರ್.ಕಾಂ ಜೊತೆಗೆ ಖಾಸಗಿ ಕಾರು ವಿಮಾ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದಿಂದಾಗಿ ಕಾರುಗಳ ಬಳಕೆಯ ಆಧಾರದ ಮೇಲೆ ಗ್ರಾಹಕರು ವಿಮಾ ಕಂತುಗಳನ್ನು ಪಾವತಿಸಬಹುದು.

ಈ ಯೋಜನೆಗೆ ಪೇ ಆಸ್ ಯೂ ಯೂಸ್ ಅಂದರೆ ಚಾಲನೆ ಮಾಡಿದಷ್ಟು ಪಾವತಿಸಿ ಎಂದು ಹೆಸರಿಡಲಾಗಿದೆ. ಈ ಯೋಜನೆಯಿಂದಾಗಿ ತಮ್ಮ ಕಾರನ್ನು ಅಪರೂಪಕ್ಕೆ ಬಳಸುವವರಿಗೆ ಅಥವಾ ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವವರಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಒಂದು ವರ್ಷದಲ್ಲಿ ಎಷ್ಟು ಕಿ.ಮೀ ಕಾರನ್ನು ಚಲಾಯಿಸಲಾಗುತ್ತದೆ ಎಂಬುದನ್ನು ಹೇಳಬೇಕು.

ಗ್ರಾಹಕರು ಹೇಳುವ ಅಂದಾಜು ಬಳಕೆಯ ಆಧಾರದ ಮೇಲೆ ವಿಮಾ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತದೆ. ಗ್ರಾಹಕರು ತಮ್ಮ ಬಳಕೆಯ ಅಗತ್ಯಗಳಿಗೆ ಅನುಗುಣವಾಗಿ 2,500 ಕಿ.ಮೀ, 5,000 ಕಿ.ಮೀ ಹಾಗೂ 7,500 ಕಿ.ಮೀ ಎಂಬ ಮೂರು ಸ್ಲಾಬ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಭಾರತಿ ಆಕ್ಸಾ ಇನ್ಶುರೆನ್ಸ್‌ನ ಸಿಇಒ ಸಂಜೀವ್ ಶ್ರೀನಿವಾಸನ್‌ರವರು ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ವಾಹನ ಬಳಕೆಯನ್ನು ಆಧರಿಸಿದ ವಿಮಾ ಪಾಲಿಸಿಯು ಬಹಳ ಮುಖ್ಯವಾದುದಾಗಿದೆ ಎಂದು ಹೇಳಿದರು.

ಈ ರೀತಿಯ ಪಾಲಿಸಿಯೊಂದಿಗೆ, ಕಾರನ್ನು ಕಡಿಮೆ ಬಳಸುವ ಜನರು ಸಾಕಷ್ಟು ಹಣವನ್ನು ಉಳಿಸಬಹುದು. ಈ ಯೋಜನೆಯನ್ನು ತೆಗೆದುಕೊಳ್ಳಲು ಬಯಸುವ ಗ್ರಾಹಕರು ಮೂರು ಪ್ರೀಮಿಯಂ ಸ್ಲಾಬ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಕಾರಿನ ಓಡೋಮೀಟರ್‌ನಲ್ಲಿರುವ ರೀಡಿಂಗ್ ಹಾಗೂ ಕೆವೈಸಿ ಮಾಹಿತಿಗಳನ್ನು ನೀಡಬೇಕು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಯೋಜನೆಯು ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಸ್ಟಾಂಡರ್ಡ್ ಪಾಲಿಸಿಯಲ್ಲಿ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಈ ಪಾಲಿಸಿಯಲ್ಲಿಯೂ ನೀಡಲಾಗುತ್ತದೆ. ಯಾವುದೇ ಸಮಯದಲ್ಲಿ ಸ್ಲಾಬ್‌ಗಳನ್ನು ಬದಲಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುವುದು.

ಈ ವಾಹನ ವಿಮಾ ಪಾಲಿಸಿಗೆ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಅನುಮೋದನೆಯನ್ನು ನೀಡಿದೆ. ಈ ಯೋಜನೆಯಿಂದ ಕಾರ್ ಅನ್ನು ಕಡಿಮೆ ಬಳಸುವವರಿಗೆ ಪ್ರಯೋಜನವಾಗಲಿದೆ.

ಕರೋನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಮೇ 3ರ ನಂತರವೂ ವಿಸ್ತರಣೆ ಮಾಡಲಿದ್ದು, ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಭೀತಿಯಲ್ಲಿವೆ.

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಎಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟವನ್ನು ನಿಷೇಧಗೊಳಿಸಿ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಂಡಿದ್ದು, ಬಿಎಸ್-4 ವಾಹನಗಳ ಬ್ಯಾನ್‌ಗೆ ಕೇವಲ 10 ದಿನ ಬಾಕಿ ಇರುವಾಗ ಲಾಕ್‌ಡೌನ್ ವಿಧಿಸಲಾಗಿತ್ತು.

ಇದರಿಂದ ಹಳೆಯ ವಾಹನಗಳ ಸ್ಟಾಕ್ ಪೂರ್ಣ ಪ್ರಮಾಣದಲ್ಲಿ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಬಿಎಸ್-4 ವಾಹನಗಳು ಬ್ಯಾನ್ ಆಗಿದ್ದರೂ ಹಳೆಯ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ಕೆಲವು ವಿನಾಯ್ತಿ ನೀಡಿತ್ತು.

ಏಪ್ರಿಲ್ 15ರಿಂದ ಏಪ್ರಿಲ್ 24ರ ತನಕ ಶೇ.10ರಷ್ಟು ಬಿಎಸ್-4 ವಾಹನ ಸ್ಟಾಕ್ ಮಾರಾಟಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯುವುದಕ್ಕಾಗಿ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಅವಕಾಶ ಮಾಡಿಕೊಟ್ಟಿತ್ತು.

ಆದರೆ ಇದೀಗ ಕರೋನಾ ವೈರಸ್ ಅಟ್ಟಹಾಸವು ದಿನಂದಿನಕ್ಕೆ ಹೆಚ್ಚುತ್ತಿದ್ದಂತೆ ಲಾಕ್‌ಡೌನ್ ಅವಧಿಯನ್ನು ಮೇ 3ರ ನಂತರವೂ ವಿಸ್ತರಣೆ ಮಾಡುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಬಿಎಸ್-4 ವಾಹನ ಮಾರಾಟ ಅವಧಿಯನ್ನು ಮುಂದೂಡುವ ಸಾಧ್ಯತೆಗಳಿವೆ.

ಲಾಕ್‌ಡೌನ್‌ನಿಂದಾಗಿ ಆಟೋ ಕಂಪನಿಗಳು ದಿನಂಪ್ರತಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಈ ಮಧ್ಯೆ ಸರಕು ಸಾಗಾಣಿಕೆ ಮಾಡುತ್ತಿದ್ದ ಸುಮಾರು 3.50 ಲಕ್ಷಕ್ಕೂ ಹೆಚ್ಚು ಲಾರಿಗಳು ಮಾರ್ಗಮಧ್ಯದಲ್ಲೇ ಉಳಿದಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಗೂಡ್ಸ್ ಲಾರಿಗಳಲ್ಲಿ ವಿವಿಧ ಆಟೋ ಕಂಪನಿಗಳ ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳಿದ್ದು, ಲಾಕ್ ಡೌನ್‌ನಿಂದಾಗಿ ರಸ್ತೆ ಬದಿಯಲ್ಲೇ ಉಳಿಯುವಂತಾಗಿದೆ.

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಆಹಾರ ಪದಾರ್ಥಗಳು ಮತ್ತು ಅಗತ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಗೃಹಬಳಕೆಯ ವಸ್ತುಗಳು ಮತ್ತು ಆಟೋ ಉತ್ಪಾದನಾ ಸರಕು ಸಾಗಾಣಿಕೆಯ ವಾಹನಗಳಿಗೆ ಭಾರೀ ಹೊಡೆತ ಬೀಳುತ್ತಿದೆ.

ಅಂದಾಜು ಒಂದರ ಪ್ರಕಾರ, ಕೇವಲ ಆಟೋ ಉತ್ಪಾದನಾ ಕಂಪನಿಗಳಿಗೆ ಮಾತ್ರ ಸಂಬಂಧಿಸಿದ ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳು ಮತ್ತು ಬಿಡಿಭಾಗಗಳನ್ನು ಹೊತ್ತಬರುತ್ತಿರುವ ವಾಹನಗಳು ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿವೆ.

ಇದರಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಲೈಫ್‌ಸ್ಟೈಲ್ ಸರಕು ಹೊತ್ತು ಬರುತ್ತಿರುವ ಸರಕು ವಾಹನಗಳು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಇದರ ನಡುವೆ ಹೆದ್ದಾರಿಗಳಲ್ಲಿ ಕಳ್ಳತನ ಪ್ರಕರಣಗಳು ಕೂಡಾ ಲಾರಿ ಚಾಲಕರ ನಿದ್ದೆಗೆಡಿಸಿದೆ.

ಲಾಕ್ ಡೌನ್ ನಂತರ ಹೆದ್ದಾರಿಗಳಲ್ಲೇ ವಾಸ್ತವ್ಯ ಹೂಡಿರುವ ಲಾರಿ ಚಾಲಕರಿಗೆ ಒಂದು ಕಡೆ ದಿನನಿತ್ಯದ ಆಹಾರ ವ್ಯವಸ್ಥೆ ಮಾಡಿಕೊಳ್ಳುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಪ್ರತಿ ಟ್ರಕ್‌ಗಳಲ್ಲೂ ಲೋಡ್ ಮಾಡಲಾಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳನ್ನು ಕಾಯ್ದುಕೊಳ್ಳುವುದು ಮತ್ತೊಂದು ಸವಾಲಾಗಿದೆ.

ಕೆಲವು ಕಡೆಗಳಲ್ಲಿ ಚಾಲಕರನ್ನು ಬೆದರಿಸಿ ಸರಕು ಕಳ್ಳತನ ಮಾಡಿರುವ ಪ್ರಕರಣಗಳು ಕೂಡಾ ಈಗಾಗಲೇ ದಾಖಲಾಗಿದ್ದು, ಮುಂದಿನ ಆದೇಶದ ವರೆಗೂ ಟ್ರಕ್ ಚಾಲಕರು ಸರಕ ಅನ್ನು ಕಾಪಾಡಿಕೊಳ್ಳಬೇಕಿರುವ ದೊಡ್ಡಸವಾಲಾಗಿದೆ.


Click it and Unblock the Notifications