ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಸ್‌ಯುವಿ ಪ್ರದರ್ಶನಗೊಳಿಸಲಿದೆ ಫೋಕ್ಸ್‌ವ್ಯಾಗನ್
ಫೆಬ್ರುವರಿ 5ರಿಂದ ದೆಹಲಿ ಆಟೋ ಎಕ್ಸ್‌ಪೋ ಆರಂಭವಾಗಲಿದ್ದು, ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ 100ಕ್ಕೂ ಹೆಚ್ಚು ಹೊಸ ಕಾರು ಮಾದರಿಗಳು ಅನಾವರಣಗೊಳ್ಳಲಿವೆ. ಅನಾವರಣಗೊಳ್ಳಲಿರುವ ಕಾರುಗಳಲ್ಲಿ ಸಾಮಾನ್ಯ ಮಾದರಿಯ ಕಾರು ಮಾದರಿಗಳಲ್ಲದೇ ಎಲೆಕ್ಟ್ರಿಕ್ ಕಾರುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಳ್ಳಲಿವೆ.

ಜಮರ್ನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಕೂಡಾ ಈ ಬಾರಿಯ ಆಟೋ ಮೇಳದಲ್ಲಿ ಭಾರೀ ನೀರಿಕ್ಷೆಯೊಂದಿಗೆ ತನ್ನ ಭವಿಷ್ಯ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸುತ್ತಿದ್ದು, ಎಒ ಎಸ್‌ಯುವಿ, ಟಿ-ರಾಕ್, ಟಿಗ್ವಾನ್ ಆಲ್‌ಸ್ಪೆಸ್ ಮತ್ತು ಐಡಿ ಕ್ರಾಜ್ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನಗೊಳಿಸುವುದಾಗಿ ಅಧಿಕೃತ ಮಾಹಿತಿ ನೀಡಿದೆ. ಇದರಲ್ಲಿ ಟಿ-ರಾಕ್ ಮತ್ತು ಟಿಗ್ವಾನ್ ಆಲ್‌ಸ್ಪೆಸ್ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದರೆ ಇನ್ನುಳಿದ ಎಒ ಮತ್ತು ಐಡಿ ಕ್ರಾಜ್ ಎಲೆಕ್ಟ್ರಿಕ್ ಕಾರು ತದನಂತರದಲ್ಲಿ ಬಿಡುಗಡೆಯಾಗಲಿದೆ.

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, 'ಇಂಡಿಯಾ 2.0 ಪ್ರೋಜೆಕ್ಟ್' ಎನ್ನುವ ಬೃಹತ್ ಯೋಜನೆ ಒಂದನ್ನು ಸಿದ್ದಪಡಿಸಿದೆ. ಇದರ ಜವಾಬ್ದಾರಿಯನ್ನು ಸ್ಕೋಡಾ ಸಂಸ್ಥೆಗೆ ವಹಿಸಿಕೊಟ್ಟಿದ್ದು, ಮುಂಬರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ರತಿಯೊಂದು ಕಾರು ಮಾದರಿಯು ಸಹ ಸ್ಕೋಡಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಮಾಹಿತಿಗಳ ಪ್ರಕಾರ, ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಕೋಡಾ ಜೊತೆಗೂಡಿ ಭಾರತದಲ್ಲಿ ವಿವಿಧ ಮಾದರಿಯ ಐದು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇವುಗಳಲ್ಲಿ ಕೆಲವು ಕಾರುಗಳು ಭಾರತದಲ್ಲೇ ಉತ್ಪಾದನೆಯಾಗಲಿದ್ದಲ್ಲಿ ಇನ್ನು ಕೆಲವು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಇವುಗಳಲ್ಲಿ ಟಿ-ರಾಕ್ ಎನ್ನುವ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ದೆಹಲಿ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ ನಂತರ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡು ಈ ಕಾರನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರವು ಕಳೆದ ವರ್ಷ ಆಮದು ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಹೊಸ ನಿಯಮದಡಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದೆ.

ಭಾರತದಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ಪ್ರತಿ ವರ್ಷ 2,500 ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಯಾವುದೇ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳಬಹುದು ಎಂದಿದ್ದು, ಈ ಹಿನ್ನಲೆ ಫೋಕ್ಸ್‌ವ್ಯಾಗನ್ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯತ್ತಮ ಬೇಡಿಕೆ ಹೊಂದಿರುವ ಟಿ-ರಾಕ್ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಕಿಯಾ ಸೆಲ್ಟೊಸ್ ಕಾರಿಗೆ ಸರಿಸಮನಾದ ವೀಲ್ಹ್‌ಬೆಸ್ ಮತ್ತು ಉದ್ದಳತೆಯನ್ನು ಹೊಂದಿರುವ ಟಿ-ರಾಕ್ ಕಾರು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

ಆದ್ರೆ ಟಿ-ರಾಕ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಒದಗಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, 2015ರಲ್ಲಿ ನಡೆದ ಡೀಸೆಲ್ ಎಂಜಿನ್ ಹಗರಣವು ಫೋಕ್ಸ್‌ವ್ಯಾಗನ್ ಸಂಸ್ಥೆಗೆ ಭಾರೀ ಪ್ರಮಾಣದ ಹೊಡೆತ ನೀಡಿತ್ತು. ಹೀಗಾಗಿ ಡೀಸೆಲ್ ಎಂಜಿನ್ ಬಗ್ಗೆ ಹೆಚ್ಚು ಗಮನಹರಿಸದ ಫೋರ್ಕ್ಸ್‌ವ್ಯಾಗನ್ ಸಂಸ್ಥೆಯು ಪೆಟ್ರೋಲ್ ಎಂಜಿನ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಇದಲ್ಲದೇ ಟಿ-ರಾಕ್ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ಡ್ರೈವ್ ಟೆಕ್ನಾಲಜಿ ಹೊಂದಿರಲಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 4x4 ಡ್ರೈವ್ ಟ್ರೈನ್ ಸೇರಿದಂತೆ ಹಲವಾರು ಪ್ರೀಮಿಯಂ ಫಿಚರ್ಸ್‌ಗಳನ್ನು ಹೊಂದಿರಲಿದೆ.

ಇದರಿಂದ ಟಿ-ರಾಕ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.17 ಲಕ್ಷ ಬೆಲೆ ಪಡೆದುಕೊಳ್ಳಬಹುದು ಅಂದಾಜಿಸಲಾಗಿದೆ.

ಇನ್ನುಳಿದಂತೆ ಭಾರತದಲ್ಲಿ ಸ್ಕೋಡಾ ಸಂಸ್ಥೆಗೆ ತನ್ನ ಹೊಸ ಕಾರು ಮಾದರಿಗಳ ಅಭಿವೃದ್ಧಿ ಯೋಜನೆಯ ಜವಾಬ್ದಾರಿ ವಹಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಕಾರುಗಳನ್ನು ತಯಾರಿಸಿ ಭಾರೀ ಪ್ರಮಾಣದ ಆದಾಯ ಗಳಿಕೆಯ ತವಕದಲ್ಲಿದ್ದು, ಜಂಟಿಯಾಗಿ ಕಾರು ಉತ್ಪಾದನೆಗಾಗಿ ತೆರೆಯಲಾಗಿರುವ MQB ಎನ್ನುವ ಪ್ಲ್ಯಾಟ್‌ಫಾರ್ಮ್ ಮಾದರಿಯು ಕಾರುಗಳ ನಿರ್ಮಾಣ ವೆಚ್ಚವನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಲಿದೆ.


Click it and Unblock the Notifications








