ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ
ಜರ್ಮನ್ ಕಾರು ಉತ್ಪಾದನಾ ಕಂಪನಿ ಫೋಕ್ಸ್‌ವ್ಯಾಗನ್ ತನ್ನ ಜನಪ್ರಿಯ ಎಸ್‌ಯುವಿ ಆವೃತ್ತಿಯಾದ ಟಿ-ರಾಕ್ ಮಾದರಿಯನ್ನು ಭಾರತದಲ್ಲೂ ಪರಿಚಯಿಸಿದ್ದು, ಹೊಸ ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದೆ.

ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ಟಿ-ರಾಕ್ ಕಾರನ್ನು ಬಿಡುಗಡೆಗೊಳಿಸಲಾಗಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ಕಾರು ಉತ್ಪಾದನಾ ಕಂಪನಿಗಳು ಭಾರತಕ್ಕೆ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2500 ವಾಹನಗಳನ್ನು ಆಮದುಮಾಡಿಕೊಂಡು ಮಾರಾಟ ಮಾಡುವ ಅವಕಾಶ ನೀಡಿದೆ. ಇದರಿಂದ ಫೋಕ್ಸ್‌ವ್ಯಾಗನ್ ಸೇರಿದಂತೆ ಹಲವು ಕಾರು ಕಂಪನಿಗಳು ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ವಾಹನ ಮಾದರಿಗಳನ್ನು ಭಾರತದಲ್ಲೂ ಸೀಮಿತ ಪ್ರಮಾಣದಲ್ಲಿ ಮಾರಾಟಕ್ಕೆ ಸಿದ್ದತೆ ನಡೆಸಿವೆ.

ಇದೀಗ ಬಿಡುಗಡೆಯಾಗಿರುವ ಟಿ-ರಾಕ್ ಕಾರು ಮಾದರಿ ಕೂಡಾ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು(ಸಿಕೆಡಿ) ಮಾಡಿಕೊಂಡ ಆವೃತ್ತಿಯಾಗಿದ್ದು, ಐಷಾರಾಮಿ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದೆ.

ಹೊಸ ಟಿ-ರಾಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.19.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರು ಒಂದೇ ಒಂದು ವೆರಿಯೆಂಟ್ ಖರೀದಿಗೆ ಲಭ್ಯವಿದೆ.

ಫೋಕ್ಸ್‌ವ್ಯಾಗನ್ ಸಂಸ್ಥೆಯ ಮಾರ್ಡನ್ ಡಿಸೈನ್ ಪ್ರೇರಣೆ ಹೊಂದಿರುವ ಟಿ-ರಾಕ್ ಕಾರು ಯುರೋಪಿನ್ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಎಸ್‌ಯುವಿ ಕಾರು ಮಾದರಿಗಳಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟಿರುವ ಐಷಾರಾಮಿ ಫೀಚರ್ಸ್ ಇಷ್ಟಪಡುವ ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದೆ. ಈಗಾಗಲೇ ಹೊಸ ಕಾರು ಖರೀದಿಗಾಗಿ 500ಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಮುಂದಿನ ವಾರದಲ್ಲಿ ಹೊಸ ಕಾರು ವಿತರಣೆಯು ಆರಂಭವಾಗಲಿದೆ.

ಟಿ-ರಾಕ್ ಕಾರು ದುಬಾರಿ ಬೆಲೆಗೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಆಕರ್ಷಕ ಮುಂಭಾಗದ ಗ್ರಿಲ್ ಜೊತೆಗೆ ಫೋಕ್ಸ್‌ವ್ಯಾಗನ್ ಲೊಗೊ, ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಕಾರ್ನರಿಂಗ್ ಲೈಟ್ಸ್, ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ.

ಹಾಗೆಯೇ ಹಲವಾರು ಸ್ಪೋರ್ಟಿ ಫೀಚರ್ಸ್‌ಗಳನ್ನು ಹೊಂದಿರುವ ಟಿ-ರಾಕ್ ಕಾರಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್, ಆಕರ್ಷಕವಾದ ವೀಲ್ಹ್ ಆರ್ಚ್, ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಟೈಲಿಷ್ ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್‌ಗಳು ಗಮನಸೆಳೆಯಲಿದ್ದು, ಕಾರಿನ ಒಳಭಾಗದ ಫೀಚರ್ಸ್‌ಗಳ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಹೊಸ ಕಾರಿನಲ್ಲಿ ವರ್ಚುವಲ್ ಕುಕ್‌ಪಿಟ್ ಜೋಡಿಸಲಾಗಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್‍ಟೈನ್‌ಮೆಂಟ್ ಸಿಸ್ಟಂ, ಅತ್ಯುತ್ತಮ ಲೆದರ್ ಆಸನಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಅಳವಡಿಸಲಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೊತೆಗೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಟಿಎಸ್ಐ(ಇವೊ) ಪೆಟ್ರೋಲ್ ಎಂಜಿನ್ ಹೊಂದಿರುವ ಟಿ-ರಾಕ್ ಕಾರು 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಗಂಟೆಗೆ ಗರಿಷ್ಠ 204 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಈ ಮೂಲಕ ಜೀಪ್ ಕಂಪಾಸ್ ಕಾರಿಗೆ ನೇರ ಪೈಪೋಟಿ ನೀಡಲಿರುವ ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಮಧ್ಯಮ ಗಾತ್ರದ ಕಾರುಗಳಲ್ಲಿ ಐಷಾರಾಮಿ ಫೀಚರ್ಸ್ ಇಷ್ಟಪಡುವ ಎಸ್‌ಯುವಿ ಪ್ರಿಯರಿಗೆ ಹೊಸ ಕಾರು ಪ್ರಮುಖ ಆಕರ್ಷಣೆಯಾಗಲಿದೆ.


Click it and Unblock the Notifications








